ಜೈಪುರ (ಕರಾವಳಿ ಟೈಮ್ಸ್) : ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನೇತೃತ್ವದ 19 ಶಾಸಕರು ಬಂಡಾಯವೆದ್ದ ಪರಿಣಾಮ ರಾಜಸ್ಥಾನದಲ್ಲಿ ಪತನದತ್ತ ಬಂದಿದ್ದ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರ ಶುಕ್ರವಾರ ನಡೆದ ವಿಶ್ವಾಸ ಮತದಲ್ಲಿ ಜಯಗಳಿಸಿದ್ದು, ಕಳೆದ ಕೆಲ ದಿನಗಳಲ್ಲಿ ನಡೆಯುತ್ತಿದ್ದ ರಾಜ್ಯದ ಎಲ್ಲಾ ಹೈಡ್ರಾಮಗಳಿಗೆ ತೆರೆ ಬಿದ್ದಿದೆ. ಮುಂದಿನ 6 ತಿಂಗಳು ಯಾವುದೇ ಗೊಂದಲ ಇಲ್ಲದೇ ಸರಕಾರ ಮುಂದುವರೆಯಲಿದೆ.
ಶುಕ್ರವಾರ ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತದಲ್ಲಿ ಅಶೋಕ್ ಗೆಹ್ಲೋಟ್ ಸರಕಾರದ ಪರ 125 ಶಾಸಕರು ಬೆಂಬಲ ಸೂಚಿಸಿದರೆ, ಬಿಜೆಪಿ ಪರ 75 ಶಾಸಕರು ಬೆಂಬಲ ಸೂಚಿಸಿದರು. ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬಂಡಾಯದ ಬಳಿಕ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇತ್ತೀಚೆಗೆ ಪೈಲಟ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗುವ ಮೂಲಕ ಈ ಎಲ್ಲ ಅನುಮಾನಗಳಿಗೆ ತೆರೆ ಬಿದ್ದಿತ್ತು.
ಬಂಡಾಯದ ಬಳಿಕ ಎರಡೂ ತಂಡಗಳ ಶಾಸಕರು ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖಾಮುಖಿಯಾಗಿದ್ದರು. ಸಭೆಯಲ್ಲಿ ವಿಶ್ವಾಸ ಮತಯಾಚನೆ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಇಂದು ವಿಶ್ವಾಸ ಮತ ಯಾಚನೆ ನಡೆದಿದ್ದು, ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರ ವಿಶ್ವಾಸ ಮತದಲ್ಲಿ ಜಯಗಳಿಸಿದೆ.
ಈ ಬಗ್ಗೆ ಪ್ರತಿಕ್ರಯಿಸಿದ ಸಚಿನ್ ಪೈಲಟ್, ನಮ್ಮೆಲ್ಲ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಸಮಯಕ್ಕೆ ಸರಿಯಾಗಿ ಮಾರ್ಗಸೂಚಿಯಂತೆ ನಡೆದುಕೊಳ್ಳುತ್ತಾರೆಂಬ ಸಂಪೂರ್ಣ ನಂಬಿಕೆ ಇದೆ ಎಂದಿದ್ದಾರೆ. ವಿಶ್ವಾಸ ಮತಯಾಚನೆ ವೇಳೆ ಸಚಿನ್ ಪೈಲಟ್ ತಮ್ಮ ಭಾಷಣದುದ್ದಕ್ಕೂ ಒಗ್ಗಟ್ಟಿನ ಜಪ ಮಾಡಿದ್ದು, ಕಾಂಗ್ರೆಸ್‍ನಲ್ಲಿದ್ದ ಆಂತರಿಕ ಸಮಸ್ಯೆಗಳೆಲ್ಲವೂ ಬಗೆಹರಿದಿವೆ. ಆಡಳಿತ ಪಕ್ಷ ಒಗ್ಗಟ್ಟಾಗಿ ನಿಲ್ಲಲಿದೆ. ವಿರೋಧ ಪಕ್ಷ ಇದೆಲ್ಲವನ್ನು ಬಿಟ್ಟು ವಿಶ್ವಾಸ ಮತಯಾಚನೆ ಬಗ್ಗೆ ಗಮನಹರಿಸಲಿ ಎಂದರು.
ರಾಜಸ್ಥಾನ ವಿಧಾನಸಭೆಯ ಸಂಖ್ಯಾ ಬಲ (200)
ಆಡಳಿತರೂಢ ಪಕ್ಷ
ಕಾಂಗ್ರೆಸ್ - 107 (ಪೈಲಟ್ ಬೆಂಬಲಿಗರು-19, ಬಿಎಸ್‍ಪಿ- 6)
ಆರ್‍ಎಲ್‍ಡಿ - 1
ಸ್ವತಂತ್ರರು - 13
ಬಿಟಿಪಿ - 2
ಎಡಪಕ್ಷ - 2
ಒಟ್ಟು - 125
ವಿರೋಧಪಕ್ಷ
ಬಿಜೆಪಿ - 72
ಆರ್‍ಎಲ್‍ಪಿ - 3
0 comments:
Post a Comment