ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ವರ್ಷಾಂತ್ಯಕ್ಕೆ ಪಂಚಾಯತ್ ಚುನಾವಣೆ ಸಾಧ್ಯತೆ - Karavali Times ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ವರ್ಷಾಂತ್ಯಕ್ಕೆ ಪಂಚಾಯತ್ ಚುನಾವಣೆ ಸಾಧ್ಯತೆ - Karavali Times

728x90

27 August 2020

ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ವರ್ಷಾಂತ್ಯಕ್ಕೆ ಪಂಚಾಯತ್ ಚುನಾವಣೆ ಸಾಧ್ಯತೆ

 


ಬೆಂಗಳೂರು (ಕರಾವಳಿ ಟೈಮ್ಸ್) : ಕೇಂದ್ರ ಚುನಾವಣಾ ಆಯೋಗ ಹೊರಡಿಸಿರುವ ಹೊಸ ಮಾರ್ಗಸೂಚಿಗಳಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ರಾಜ್ಯ ಚುನಾವಣಾ ಆಯೋಗ ವರ್ಷಾಂತ್ಯಕ್ಕೆ ಗ್ರಾಮ ಪಂಚಾಯತ್ ಚುನಾವಣೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

ರಾಜ್ಯದಲ್ಲಿ 6025 ಗ್ರಾಮ ಪಂಚಾಯತ್‍ಗಳಿದ್ದು, ಅವುಗಳ ಅವಧಿ ಜೂನ್-ಜುಲೈ ತಿಂಗಳಿಗೆ ಅಂತ್ಯವಾಗಿದೆ. ಕೋವಿಡ್-19 ವೈರಸ್ ಹಾಗೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಸಾಧಾರಣ ಸಂದರ್ಭ ಎಂದು ಭಾವಿಸಿ ರಾಜ್ಯ ಚುನಾವಣಾ ಆಯೋಗ ಮೇ ತಿಂಗಳಲ್ಲಿ ನಡೆಯಬೇಕಾಗಿದ್ದ ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಂದೂಡಿತ್ತು.

ಈ ಮಧ್ಯೆ ಚುನಾವಣೆ ಮುಂದೂಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಗ್ರಾಮ ಪಂಚಾಯತ್ ಚುನಾವಣೆಗಾಗಿ 21 ಜಿಲ್ಲೆಗಳಲ್ಲಿ ಮೀಸಲಾತಿ ಪಟ್ಟಿ ಸಿದ್ಧವಾಗಿರುವುದಾಗಿ ರಾಜ್ಯ ಚುನಾವಣಾ ಆಯೋಗ ಇತ್ತೀಚಿಗೆ ಹೈಕೋರ್ಟ್‍ಗೆ ಮಾಹಿತಿ ನೀಡಿತ್ತು. ಉಳಿದಿರುವ 9 ಜಿಲ್ಲೆಗಳ ಮೀಸಲಾತಿ ಪಟ್ಟಿಗಾಗಿ ಸಮಯವನ್ನು ಕೋರಿತ್ತು.

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಚುನಾವಣೆ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಕೋವಿಡ್-19 ಸಂದರ್ಭದಲ್ಲಿ ಚುನಾವಣೆಗಾಗಿ ಆಯೋಗ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ಆಧಾರದ ಮೇಲೆ ಮಾರ್ಗಸೂಚಿಗಳನ್ನು ರೂಪಿಸುತ್ತೇವೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ರಾಜ್ಯ ಚುನಾವಣಾ ಆಯುಕ್ತ ಬಿ. ಬಸವರಾಜು ತಿಳಿಸಿದ್ದಾರೆ.

ಮತದಾನ ನಡೆಯುವ ಕಡೆಗಳಲ್ಲಿ ಸುರಕ್ಷತೆಯನ್ನು ಕೈಗೊಳ್ಳಬೇಕಾಗಿದ್ದು, ಹಣದ ಅಗತ್ಯವಿದೆ. ಈ ಸಂಬಂಧ ರಾಜ್ಯ ಸರಕಾರಕ್ಕೆ ಸದ್ಯದಲ್ಲಿಯೇ ಪತ್ರ ಬರೆಯಲಾಗುವುದು, ಪ್ರತಿ ಮತಗಟ್ಟೆಗೆ ಇಂತಿಷ್ಟು ಎಂಬಂತೆ ಮತದಾರರ ಪ್ರಮಾಣವನ್ನು ನಿರ್ಬಂಧಿಸಬೇಕಾಗಿದೆ. ಚುನಾವಣಾ ಸಿದ್ದತೆ ಕುರಿತಂತೆ ಸಂಬಂಧಿತ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಅವರು ಹೇಳಿದ್ದಾರೆ. ಮತದಾರರ ಪಟ್ಟಿ ಕೂಡಾ ಸಿದ್ಧವಾಗಿದ್ದು, ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಅದು ಪೂರ್ಣಗೊಳ್ಳಲು ಎರಡು ತಿಂಗಳು ಬೇಕಾಗಲಿದ್ದು, ಈ ವರ್ಷಾಂತ್ಯಕ್ಕೆ ಚುನಾವಣೆ ನಡೆಯುವ ಭರವಸೆ ಇರುವುದಾಗಿ ಬಸವರಾಜ್ ತಿಳಿಸಿದ್ದಾರೆ.








  • Blogger Comments
  • Facebook Comments

0 comments:

Post a Comment

Item Reviewed: ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ವರ್ಷಾಂತ್ಯಕ್ಕೆ ಪಂಚಾಯತ್ ಚುನಾವಣೆ ಸಾಧ್ಯತೆ Rating: 5 Reviewed By: karavali Times
Scroll to Top