ಬೆಂಗಳೂರು (ಕರಾವಳಿ ಟೈಮ್ಸ್) : ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿಗಳನ್ನು ಶೀಘ್ರದಲ್ಲೇ ವಿಲೀನ ಮಾಡಲಾಗುವುದು. ಈ ಎರಡೂ ಮಂಡಳಿಗಳನ್ನು ಏಕ ಸೂರಿನಡಿ ತರಲು ಸರಕಾರ ನಿರ್ಧಾರ ಕೈಗೊಂಡಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಯುಸಿ ಬೋರ್ಡ್ ಹಾಗೂ ಎಸ್ಸೆಸ್ಸೆಲ್ಸಿ ಬೋರ್ಡ್ ಎರಡನ್ನು ವಿಲೀನ ಮಾಡಲು ಸರಕಾರ ನಿರ್ಧರಿಸಿದೆ. “ಪ್ರಾಥಮಿಕ ಶಿಕ್ಷಣ ಪರಿಷತ್” ಶಿಕ್ಷಣ ಇಲಾಖೆಯಲ್ಲಿ ಪ್ರಾರಂಭ ಮಾಡುತ್ತೇವೆ. ಸ್ವಾಭಿಮಾನಿ ಸರಕಾರಿ ಶಾಲೆಯಾಗಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುತ್ತೇವೆ. ಉತ್ತಮ ಶಿಕ್ಷಕರಿಗೆ ವಿಶೇಷ ಪ್ರಶಸ್ತಿ ನೀಡುವ ಕೆಲಸವನ್ನು ಇಲಾಖೆ ಮಾಡುತ್ತದೆ ಎಂದರು.
ಶಿಕ್ಷಣ ಇಲಾಖೆಯ ಸಚಿವನಾಗಿ ಒಂದು ವರ್ಷ ಪೂರ್ಣಗೊಂಡಿದ್ದು, ಇದೊಂದು ಸವಾಲುಗಳಿಂದ ಕೂಡಿದ ವರ್ಷವಾಗಿತ್ತು. ಪ್ರಾರಂಭದಲ್ಲೇ ಪ್ರವಾಹದಿಂದ ಶಾಲಾ ಕಟ್ಟಡಗಳು ಬಿದ್ದು ಹೋದವು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಆರ್ಥಿಕ ಶಕ್ತಿ ನೀಡಿದರು. ಬಳಿಕ ಕೊರೊನಾ ಸೋಂಕಿನ ಪ್ರಭಾವ ಹೆಚ್ಚಾಗಿತ್ತು. ಇದು ಶಿಕ್ಷಣ ಇಲಾಖೆ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದರು.
ಕೊರೋನಾ ಕಾರಣದಿಂದ ಶಾಲೆ ಯಾವಾಗ ಪ್ರಾರಂಭ ಮಾಡುತ್ತೇವೆ, ಹೇಗೆ ತರಗತಿ ನಡೆಸುತ್ತೇವೆ ಎನ್ನುವುದು ನಿರ್ಧಾರವಾಗಿಲ್ಲ. ಆದರೆ ಈ ಮಧ್ಯೆಯೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಕೋವಿಡ್ ಸಮಯದಲ್ಲೇ ಯಶಸ್ವಿಯಾಗಿ ಮುಗಿಸಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ನಮಗೆ ಧೈರ್ಯ ನೀಡಿದರು. ನೀಟ್, ಜೆಇಇ ಪರೀಕ್ಷೆ ಬೇಡ ಎನ್ನುವರರು ನಾವು ನಡೆಸಿದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆ ಕಡೆ ಒಮ್ಮೆ ಗಮನ ಹರಿಸಲಿ ಎಂದು ಸಚಿವ ಸುರೇಶ್ ಕುಮಾರ್ ಸಲಹೆ ನೀಡಿದರು.
ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ಸಮಸ್ಯೆ ಇತ್ತು. ಈಗ ಅದಕ್ಕೆ ಹೊಸ ಕಾನೂನು ಜಾರಿಗೆ ತಂದಿದ್ದೇವೆ. ಸೆಪ್ಟೆಂಬರ್ ತಿಂಗಳಲ್ಲಿ ಶಿಕ್ಷಣ ವರ್ಗಾವಣೆ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ. ಶಿಕ್ಷಣ ತಜ್ಞರ ಮಾರ್ಗದರ್ಶನದಲ್ಲಿ ವಿದ್ಯಾಗಮ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ. ಈ ವರ್ಷ 1 ಸಾವಿರ ಉಭಯ ಮಾಧ್ಯಮಗಳ ತರಗತಿ ಪ್ರಾರಂಭ ಮಾಡುತ್ತೇವೆ. ಹೊಸ ಶಿಕ್ಷಣ ನೀತಿ ಜಾರಿಗೆ ಬಂದಿದ್ದು, ಇದನ್ನು ರಾಜ್ಯದಲ್ಲಿ ಜಾರಿ ಮಾಡುತ್ತೇವೆ ಎಂದವರು ಸುದ್ದಿಗಾರರಿಗೆ ವಿವರಿಸಿದರು.
0 comments:
Post a Comment