ಬೆಂಗಳೂರು (ಕರಾವಳಿ ಟೈಮ್ಸ್) : ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ಸ್ವಾಧೀನ ಪಡಿಸಿಕೊಂಡಿರುವ ಸ್ಥಳಗಳಲ್ಲಿ ಸರಕಾರಿ ಜಮೀನು ಹಸ್ತಾಂತರ ಪ್ರಕ್ರಿಯೆಗೆ ವೇಗ ನೀಡುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎನ್. ಶಿವಶಂಕರ್ ಜೊತೆ ಬೆಂಗಳೂರು, ಮೈಸೂರು, ತುಮಕೂರು ಹಾಗೂ ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಬೆಂಗಳೂರು, ಮೈಸೂರು, ತುಮಕೂರು ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಆದರೆ, ಸ್ವಾಧೀನಪಡಿಸಿಕೊಂಡಿರುವ ಜಮೀನುಗಳ ಪೈಕಿ ಹಲವು ಜಮೀನುಗಳು ಮಂಡಳಿಗೆ ಭೌತಿಕವಾಗಿ ಹಸ್ತಾಂತರವಾಗಲು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರ ಹಂತದಲ್ಲಿ ಬಾಕಿ ಇವೆ. ಇದರಿಂದಾಗಿ ಕೈಗಾರಿಕಾ ಪ್ರದೇಶವನ್ನು ಸಂಪೂರ್ಣವಾಗಿ ಅಭಿವೃದ್ದಿಪಡಿಸಿ ಕಂಪನಿಗಳಿಗೆ ಹಂಚಿಕೆ ಮಾಡಿ ಭೌತಿಕವಾಗಿ ಸುಪರ್ದಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಈ ಕಾರ್ಯಕ್ಕೆ ವೇಗವನ್ನು ನೀಡಬೇಕಾಗಿದೆ. ಸರಕಾರಿ ಜಮೀನಿನ ಬಗ್ಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಜೆಎಂಸಿ (ಜಾಯಿಂಟ್ ಮೆಸ್ಯೂರ್‍ಮೆಂಟ್ ಸರ್ಟಿಫಿಕೇಟ್) ವರದಿಯನ್ನು ನೀಡುವ ಅವಶ್ಯಕತೆ ಇದೆ. ಕೆಲವು ಖಾಸಗಿ ವ್ಯಕ್ತಿಗಳಿಂದ ಆಗುವ ಸಮಸ್ಯೆಗಳನ್ನು ಪರಿಹರಿಸಲು ಇದು ಪ್ರಮುಖ ಹಂತವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆಯುವುದಾಗಿ ಅವರು ತಿಳಿಸಿದರು.
ಕೈಗಾರಿಕೆಗಳನ್ನ ಸ್ಥಾಪಿಸಲು ಕೈಗಾರಿಕೋದ್ಯಮಿಗಳು ಹೆಚ್ಚು ಬೆಂಗಳೂರು, ಮೈಸೂರು, ತುಮಕೂರು, ರಾಮನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆಯನ್ನು ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಕೆಐಎಡಿಬಿ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಜಿಲ್ಲೆಯ ಆಡಳಿತ ಮುಖ್ಯಸ್ಥರಾಗಿರುವ ಜಿಲ್ಲಾಧಿಕಾರಿಗಳು ಬಹಳಷ್ಟು ವಿಷಯಗಳ ಒತ್ತಡದಿಂದ ಕೆಲವೊಮ್ಮೆ ತಡ ಆಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕೆಲವೊಂದು ಜವಾಬ್ದಾರಿಗಳನ್ನು ಎಡಿಸಿಗಳಿಗೆ ವಹಿಸುವ ಅವಶ್ಯಕತೆ ಇದೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮಾತನಾಡಿ, ದೇವನಹಳ್ಳಿ, ಆದಿನಾರಾಯಣ ಹೊಸಹಳ್ಳಿ, ದಾಬಸ್ ಪೇಟೆ ಬಳಿಯ ಕೆಲವು ಗ್ರಾಮಗಳು, ಹರಳೂರು, ಮುದ್ದೇನಹಳ್ಳೀ, ಪಾಳ್ಯ ಸೇರಿದಂತೆ ಹಲವು ಗ್ರಾಮಗಳಲ್ಲಿ ಜೆಎಂಸಿ ತಯಾರಿಸಿ ಅತಿ ಶೀಘ್ರದಲ್ಲಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
0 comments:
Post a Comment