ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಮಂಚಿ ಗ್ರಾಮದ ನಾಡಾಜೆ ನಿವಾಸಿ ಸುಲೈಮಾನ್ ಎಂಬವರ ಪುತ್ರ ಅಬ್ದುಲ್ ರಶೀದ್ (21) ಮನೆಯ ಕೋಣೆಯ ಬಾಗಿಲು ಹಾಕಿ ನೇಣಿಗೆ ಶರಣಾದ ಘಟನೆ ಗುರುವಾರ ಸಂಜೆ ಬೆಳಕಿಗೆ ಬಂದಿದೆ.
ಅತ್ಯಂತ ಸೌಮ್ಯ ಸ್ವಭಾವದ ಯುವಕನ ಈ ಕೃತ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಮನೆಯಲ್ಲಿ ಇದ್ದರೆ ಇದ್ದಾನೋ ಇಲ್ಲವೋ ಎಂದು ಗೊತ್ತಾಗದಷ್ಟು ಮೌನಿ ಸ್ವಭಾವ ಹೊಂದಿದ್ದ ರಶೀದ್ ಗುರುವಾರ ಮಧ್ಯಾಹ್ನ ಮನೆಯ ಕೋಣೆಗೆ ತೆರಳಿ ಬಾಗಿಲು ಹಾಕಿದ್ದ ಎನ್ನಲಾಗಿದ್ದು, ಸಂಜೆಯ ಬಳಿಕವೂ ಕೋಣೆಯಿಂದ ಹೊರಗೆ ಬಾರದೆ ಇರುವುದರಿಂದ ಆತನ ತಂದೆ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಇಲ್ಲದ್ದರಿಂದ ಕೋಣೆಯ ಕಿಟಕಿ ತೆರೆದು ನೋಡುವಾಗ ನೇಣು ಬಿಗಿದ ಕೃತ್ಯ ಬೆಳಕಿಗೆ ಬಂದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷವಷ್ಟೆ ಮಂಗಳೂರು-ಕೊಣಾಜೆ ವಿವಿ ಕ್ಯಾಂಪಸ್ಸಿನಲ್ಲಿರುವ ಪದವಿ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸಿರುವ ಈತ ಆ ಬಳಿಕ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದ. ಕೊರೋನಾ ಲಾಕ್ ಡೌನ್ ಬಳಿಕ ಊರಿಗೆ ಬಂದಿದ್ದು, ಯಾವುದೇ ನೌಕರಿಯಿಲ್ಲದೆ ಮನೆಯಲ್ಲೇ ಇದ್ದ. ಕೆಲಸವಿಲ್ಲದ ಕಾರಣದಿಂದ ನೊಂದುಕೊಂಡಿದ್ದ ಎನ್ನಲಾಗಿದ್ದು, ಇದೇ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯವಾಗಿ ಬಹಳಷ್ಟು ಸೌಮ್ಯ ಸ್ವಭಾವಿಯಾಗಿದ್ದ ರಶೀದ್ ಯಾರೊಂದಿಗೂ ಅನಾವಶ್ಯಕವಾಗಿ ಬೆರೆಯುತ್ತಿರಲಿಲ್ಲ ಎನ್ನಲಾಗಿದೆ. ದಿನದ ಬಹುತೇಕ ಸಮಯವನ್ನು ಏಕಾಂಗಿಯೇ ಕಳೆಯುತ್ತಿದ್ದ ಎನ್ನುವ ಸ್ಥಳೀಯರು ಅತೀ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ. ಮೊಬೈಲ್ ಮೂಲಕ ಪಬ್ಜಿಯಂತಹ ಆಟಕ್ಕೆ ಮಾರು ಹೋಗಿ ಖಿನ್ನತೆಗೊಳಗಾಗಿ ನೇಣಿಗೆ ಶರಣಾಗಿರುವ ಸಾಧ್ಯತೆ ಬಗ್ಗೆಯೂ ಸ್ಥಳೀಯರು ಬೊಟ್ಟು ಮಾಡುತ್ತಾರೆ.
ಯಾವುದೆ ಅನಾವಶ್ಯಕ ಜಂಜಾಟಗಳಿಗೆ ಕೈ ಹಾಕದ ರಶೀದ್ ಹೆಚ್ಚಾಗಿ ಏಕಾಂಗಿಯಾಗಿಯೇ ಕಳೆಯುತ್ತಿದ್ದ. ತೀರಾ ಇತ್ತೀಚೆಗೆ ಕರೆ ಸ್ವೀಕರಿಸುತ್ತಿರಲಿಲ್ಲ. ಮೆಸೇಜ್ ಮಾಡಿದರೂ ಪ್ರತಿಕ್ರಿಯೆ ಮಾಡುತ್ತಿರಲಿಲ್ಲ. ಯಾವುದೋ ಮಾನಸಿಕ ಖಿನ್ನತೆಯಿಂದಲೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ರಶೀದ್ ನ ಕಾಲೇಜು ಸಹಪಾಠಿಗಳು ತಿಳಿಸುತ್ತಾರೆ.
0 comments:
Post a Comment