ಬಂಟ್ವಾಳ (ಕರಾವಳಿ ಟೈಮ್ಸ್) : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಬಿ ಸಿ ರೋಡಿನ ಕಾರ್ಮಿಕ ನಿರೀಕ್ಷಕರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ, ರಾಜ್ಯ ಸರಕಾರವು ಕಲ್ಯಾಣ ಮಂಡಳಿಯಿಂದ ಕಟ್ಟಡ ಕಾರ್ಮಿಕರಿಗೆ ಐದು ಸಾವಿರ ರೂಪಾಯಿಯಂತೆ ಪ್ರತೀ ನೋಂದಾಯಿತ ಕಾರ್ಮಿಕರಿಗೆ ಪರಿಹಾರವನ್ನು ಘೋಷಣೆ ಮಾಡಿದ್ದು ,ಆದರೆ ಈ ಹಣವು ಕೇವಲ ಬೆರಳೆಣಿಕೆಯ ಕಾರ್ಮಿಕರಿಗೆ ಮಾತ್ರ ಸಿಕ್ಕಿದ್ದು ಉಳಿದ ಕಾರ್ಮಿಕರಿಗೆ ಇನ್ನೂ ದೊರೆತಿಲ್ಲ. ಸರಕಾರವು ಕಲ್ಯಾಣ ಮಂಡಳಿಯ ಹಣವನ್ನು ವಲಸೆ ಕಾರ್ಮಿಕರಿಗೆ ಪರಿಹಾರ ನೀಡುವ ಮೂಲಕ ಕಟ್ಟಡ ಕಾರ್ಮಿಕರಿಗೆ ಅನ್ಯಾಯ ಮಾಡಿದೆ. ಸರಕಾರವು ಜನರ ಧ್ವsÀನಿಯನ್ನು ಹತ್ತಿಕ್ಕಲು ಕೊರೋನಾದ ಹೆಸರಿನಲ್ಲಿ ಕಡಿವಾಣ ಹಾಕುತ್ತಿದೆ ಎಂದವರು ಆರೋಪಿಸಿದರು.
ಕೂಡಲೇ ಕಾರ್ಮಿಕ ಅಧಿಕಾರಿಗಳು ಸಮಸ್ಯೆಗಳನ್ನು ಪರಿಹರಿಸದ್ದಿದ್ದರೆ ಎಲ್ಲಾ ಕಟ್ಟಡ ಕಾರ್ಮಿಕರನ್ನು ಒಟ್ಟು ಸೇರಿಸಿ ಕಾರ್ಮಿಕ ಅಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವುದಾಗಿ ಇದೇ ವೇಳೆ ಅವರು ಎಚ್ಚರಿಸಿದರು.
ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಸಮಗ್ರ ಕೋವಿಡ್ ಪರಿಹಾರ ನೀಡಬೇಕು. ಕಲ್ಯಾಣ ಮಂಡಳಿಯು ಕೋವಿಡ್ ಪರಿಹಾರದ ಲೆಕ್ಕ ನೀಡಬೇಕು, ಕಲ್ಯಾಣ ಮಂಡಳಿಗಳನ್ನು ವಿಲೀನಗೊಳಿಸುವ ಕೇಂದ್ರ ಸರಕಾರದ ನೀತಿಯನ್ನು ಕೈ ಬಿಡಬೇಕು, ಕೋವಿಡ್ ಪರಿಹಾರಕ್ಕೆ ಅರ್ಜಿ ಹಾಕಲು ಬಾಕಿ ಇರುವ ಕಾರ್ಮಿಕರಿಗೆ ಅರ್ಜಿ ಹಾಕಲು ಅವಕಾಶ ನೀಡಬೇಕು ಇವೇ ಮೊದಲಾದ ಬೇಡಿಕೆಗಳನ್ನು ಕಾರ್ಮಿಕರು ಸರಕಾರದ ಮುಂದಿಟ್ಟರು.
ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ ಬಂಟ್ವಾಳ ಕಾರ್ಮಿಕ ನಿರೀಕ್ಷಕರ ಮುಖಾಂತರ ಮನವಿ ಸಲ್ಲಿಸಲಾಯಿತು. ಮುಖಂಡರಾದ ಉದಯಕುಮಾರ್ ಬಂಟ್ವಾಳ, ಸುರೇಂದ್ರ ಕೋಟ್ಯಾನ್, ರಾಜಾ ಚೆಂಡ್ತಿಮಾರ್, ಮಹಮ್ಮದ್ ಹನೀಫ್, ದಿನೇಶ್ ಆಚಾರಿ ಮಾಣಿ, ಲಿಯಾಕತ್ ಖಾನ್, ನ್ಯಾಯವಾದಿ ಮಹಮ್ಮದ್ ಗಝಾಲಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment