ಕೇರಳ ವಿಮಾನ ದುರಂತದ ಮನಕಲಕುವ ಘಟನೆ
ಮಡಿಲಲ್ಲಿ ಮಲಗಿದ್ದ ಪುಟ್ಟ ಮಗು ತಾಯಿ ಜೊತೆ ಯಾತ್ರೆಯಾಯಿತು
ತಿರುವನಂತಪುರಂ (ಕರಾವಳಿ ಟೈಮ್ಸ್) : ಕೇರಳದ ಕರಿಪುರ ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾದವರ ಪೈಕಿ ಕುಟುಂಬವೊಂದರ ನವಜಾತ ಕಂದಮ್ಮ ಅಜ್ಜನ ಮನೆ ಸೇರುವ ಮುಂಚೆಯೇ ತಾಯಿಯ ಮಡಿಲಲ್ಲಿ ಮಲಗಿ ತಾಯಿ ಜೊತೆ ಇಹಲೋಕ ತ್ಯಜಿಸಿದ ಮನಕರಗುವ ಘಟನೆ ಬೆಳಕಿಗೆ ಬಂದಿದೆ.
ಕೋಯಿಕ್ಕೋಡ್ ವೆಲ್ಲಿಮಡುಕುನ್ನು ನಿವಾಸಿ ಮುಹಮ್ಮದ್ ನಿಝಾಂ-ಶಾಹಿರಾ ದಂಪತಿಯ ಒಂದು ವರ್ಷದ ಕಂದಮ್ಮ ಅಝಂ ದುಬೈಯಲ್ಲಿ ಜನಿಸಿದ್ದು, ಮೊದಲ ಬಾರಿಗೆ ಅಜ್ಜನ ಮನೆಗೆ ಬರುತ್ತಿದ್ದ ಸಂದರ್ಭ ನಡೆದ ವಿಮಾನ ಅವಘಡದಲ್ಲಿ ಅಝಂ ತಾಯಿ ಮಡಿಲಲ್ಲಿ ಮಲಗಿದ ಸ್ಥಿತಿಯಲ್ಲೇ ತಾಯಿ ಜೊತೆ ಈ ಲೋಕಕ್ಕೆ ವಿದಾಯ ಹೇಳಿದ್ದಾನೆ.
ಈ ದಂಪತಿಗೆ ಅಝಂ ಒಂದು ವರ್ಷದ ಹಿಂದೆ ದುಬೈಯಲ್ಲಿ ಜನಿಸಿದ್ದಾನೆ. ಮಗುವಿಗೆ 1 ವರ್ಷವಾದ ಬಳಿಕ ಇದೀಗ ತಮ್ಮ ಮಗುವನ್ನು ತಾಯ್ನಾಡಿಗೆ ಪರಿಚಯಿಸಲು ತಾಯಿ ತನ್ನ ಮೂವರು ಮಕ್ಕಳೊಂದಿಗೆ ವಿಮಾನ ಹತ್ತಿದ್ದರು. ಆದರೆ ಕಂದಮ್ಮ ಅಝಂ ಮೊದಲ ಪ್ರಯಾಣವೇ ಅಂತಿಮ ಪ್ರಯಾಣವಾಗುವಂತಾದದ್ದು ಮಾತ್ರ ಇಡೀ ಕುಟುಂಬವನ್ನೇ ದುಃಖದ ಕಡಲಲ್ಲಿ ಮುಳುಗಿಸಿದೆ.
ಮೊಮ್ಮಗನನ್ನು ಕಾಣಲು ಕಾತರದಿಂದ ಕಾಯುತ್ತಿದ್ದ ಅಜ್ಜ-ಅಜ್ಜಿ ಇದೀಗ ನಿರಾಶರಾಗಿದ್ದಾರೆ. ಕಂದಮ್ಮನ ತಾಯಿ 29 ವರ್ಷ ಪ್ರಾಯದ ಶಾಹಿರಾ ಬಾನು ಕೂಡಾ ಅವಘಡದಲ್ಲಿ ಬಲಿಯಾಗಿದ್ದಾರೆ.
ಅಝಂ ಸಹೋದರರಾದ ಇಹಾನ್ ಮುಹಮ್ಮದ್ (8) ಹಾಗೂ ಮರಿಯಮ್ ಮುಹಮ್ಮದ್ (4) ಘಟನೆಯಲ್ಲಿ ಗಾಯಗೊಂಡಿದ್ದು, ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸುತ್ತಿದ್ದಾರೆ ಎನ್ನಲಾಗಿದೆ.
ಕೇರಳದ ಪರಿಪುರದಲ್ಲಿ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದ ಸಂದರ್ಭದಲ್ಲಿ ಕಂದಮ್ಮ ಅಜಂ ತನ್ನ ತಾಯಿಯ ತೊಡೆಯ ಮೇಲೆ ಕುಳಿತುಕೊಂಡಿದ್ದ ಎನ್ನಲಾಗಿದೆ.
ನಿಝಾ ಹಾಗೂ ಅವರ ಕುಟುಂಬ ಕಳೆದ 10 ವರ್ಷಗಳಿಂದ ದುಬೈಯಲ್ಲಿ ನೆಲೆಸಿದೆ. ನಿಝಾಂ ಅಲ್ಲೇ ಉಳಿದುಕೊಂಡಿದ್ದು, ಶಾಹಿರಾ ತಮ್ಮ ಮೂವರು ಮಕ್ಕಳೊಂದಿಗೆ ಶುಕ್ರವಾರ ದುಬೈನಿಂದ ತಾಯ್ನಾಡಿಗೆ ಬರಲು ವಿಮಾನ ಏರಿದ್ದರು. ಆದರೆ ತಾಯ್ನಾಡು ತಲುಪುವ ಮುನ್ನವೇ ಈ ಲೋಕಕ್ಕೆ ವಿದಾಯ ಹೇಳಿದ್ದಾರೆ.
ಅಝಂನ ಹೆರಿಗೆ ಸಮಯದಲ್ಲಿ ಅವರ ತಾಯಿ ಸಕೀನಾ ಅವರು ಜೊತೆಗಿದಿದ್ದರಿಂದ ಅಜ್ಜಿ ಮಾತ್ರ ಅಝಂನನ್ನು ನೋಡಿದ್ದರು. ಆದರೆ ಅಜ್ಜ ನೋಡಿರಲಿಲ್ಲ.
ಶುಕ್ರವಾರ ರಾತ್ರಿ ವಿಮಾನ ದುರಂತ ಸಂಭವಿಸುತ್ತಿದ್ದಂತೆಯೇ ಗಂಭೀರ ಗಾಯಗೊಂಡಿದ್ದ ಶಾಹಿರಾರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಿಕಿತ್ಸೆ ಫಲಕಾರಿಯಾಗೆ ಮೃತಪಟ್ಟಿದ್ದಾರೆ. ಇತ್ತ ಕಂದಮ್ಮ ಅಝಂ ಕೂಡ ಕೋಯಿಕ್ಕೋಡ್ ಮೆಡಿಕಲ್ ಕಾಲೇಜ್ ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಸಹೋದರ ಮರಿಯಮ್ ನನ್ನು ಮೊದಲು ಬೇಬಿ ಮೆಮೊರಿಯಲ್ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈತ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಾಹಿರಾ ತಂದೆ ನಿವೃತ್ತ ಶಿಕ್ಷಕರಾಗಿದ್ದು, ಮೊಮ್ಮಗನ ಬರುವಿಕೆಗಾಗಿ ಕಾದು ಕುಳಿತು ಸಂತೋಷ ಪುಳಕಿತಗೊಳ್ಳಲು ಕಾತರರಾಗಿದ್ದರು. ಆದರೆ ವಿಧಿ ಬರಹ ಬೇರೆಯೇ ಆಗಿದ್ದು, ತಾಯಿ-ಮಗು ಅಪಘಾತದಲ್ಲಿ ಮೃತರಾಗಿದ್ದಾರೆ. ಮನೆ ಮಗಳು ಹಾಗೂ ನವಜಾತ ಮೊಮ್ಮಗನನ್ನು ಕಳೆದುಕೊಂಡ ಕುಟುಂಬ ದುಃಖದ ಕಡಲಲ್ಲಿ ಮುಳುಗಿದೆ.
0 comments:
Post a Comment