ತಿರುವನಂತಪುರಂ (ಕರಾವಳಿ ಟೈಮ್ಸ್) : ಕೇರಳದಲ್ಲಿ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಮಾತನಾಡಿದ್ದು, ಮಾಹಿತಿ ಪಡೆದಿದ್ದಾರೆ. ಅಲ್ಲದೆ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಪಿಣರಾಯಿ ವಿಜಯನ್ ಅವರಿಗೆ ಕರೆ ಮಾಡಿ ವಿಮಾನ ಅವಘಡದ ಕುರಿತು ಮಾಹಿತಿ ಪಡೆದಿದ್ದಾರೆ. ಈ ವೇಳೆ ಕೋಯಿಕ್ಕೊಡ್ ಹಾಗೂ ಮಲಪ್ಪುರಂ ಜಿಲ್ಲಾಧಿಕಾರಿಗಳು ಹಾಗೂ ಐಜಿ ಅಶೋಕ್ ಯಾದವ್ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಪಿಣರಾಯಿ ವಿಜಯನ್ ಅವರು ಮಾಹಿತಿ ನೀಡಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆ ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ‘ವಂದೇ ಭಾರತ್ ಮಿಷನ್' ಆರಂಭಿಸಲಾಗಿದ್ದು, ಇದರ ಭಾಗವಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಶುಕ್ರವಾರ ಸಂಜೆ ದುಬೈನಿಂದ ಕೇರಳದ ಕೋಯಿಕ್ಕೊಡ್‍ಗೆ ಆಗಮಿಸಿ ಲ್ಯಾಂಡ್ ಆಗುತ್ತಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ. ವಿಮಾನದಲ್ಲಿ ಒಟ್ಟು 190 ಜನ ಪ್ರಯಾಣಿಸುತ್ತಿದ್ದು, 14 ಜನ ಸಾವನ್ನಪ್ಪಿದ್ದಾರೆ. 123 ಜನ ಗಾಯಗೊಂಡಿದ್ದಾರೆ. 15 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪೊಲೀಸರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಈಗಾಗಲೇ ಸೂಚಿಸಿದ್ದು, ಕೋಯಿಕ್ಕೊಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅವಘಡದ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಅಲ್ಲದೆ ರಕ್ಷಣಾ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದೇನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, ಕೇರಳದ ಕೋಯಿಕ್ಕೊಡ್ ವಿಮಾನ ನಿಲ್ದಾಣದಲ್ಲಿ ನಡೆದ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನ ಅವಘಗಡದ ಸುದ್ದಿ ಕೇಳುತ್ತಿದ್ದಂತೆ ತುಂಬಾ ನೋವಾಯಿತು. ಆದಷ್ಟು ಬೇಗ ಸ್ಥಳಕ್ಕೆ ತೆರಳುವಂತೆ ಎನ್‍ಡಿಆರ್‍ಎಫ್ ಸಿಬ್ಬಂದಿಗೆ ಸೂಚಿಸಿದ್ದೇನೆ. ಅಲ್ಲದೆ ರಕ್ಷಣಾ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸುವಂತೆ ತಿಳಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಕೇರಳದ ಕೋಯಿಕ್ಕೊಡ್‍ನಿಂದ ಬಂದ ಸುದ್ದಿಯನ್ನು ಕೇಳಿ ತುಂಬಾ ಆಘಾತವಾಯಿತು. ಸಾವು, ನೋವು ಸಂಭವಿಸಿರುವುದರಿಂದ ನೋವಾಗಿದೆ. ದುಃಖತಪ್ತ ಕುಟುಂಬಕ್ಕೆ ಸಂದೇಶ ನೀಡಲು ಬಯಸುತ್ತೇನೆ. ಗಾಯಗೊಂಡವರು ಬೇಗನೇ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ.
0 comments:
Post a Comment