ಬಂಟ್ವಾಳ (ಕರಾವಳಿ ಟೈಮ್ಸ್) : ಕೈಗಳ ಅಂಗ ವೈಕಲ್ಯತೆ ಹೊಂದಿ ಕಾಲಿನಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ತಾಲೂಕಿನ ಕಂಚಿಕಾರಪೇಟೆ ನಿವಾಸಿ ರಾಜೇಶ್ ಆಚಾರ್ಯ ಹಾಗೂ ಜಲಜಾಕ್ಷಿ ದಂಪತಿಯ ಪುತ್ರ, ಬಂಟ್ವಾಳ ಎಸ್ ವಿ ಎಸ್ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ಕೌಶಿಕ್ ಸೋಮವಾರ ಪ್ರಕಟಗೊಂಡ ಫಲಿತಾಂಶದಲ್ಲಿ 424 ಅಂಕಗಳೊಂದಿಗೆ ಶೇ 68 ಫಲಿತಾಂಶ ದಾಖಲಿಸುವ ಮೂಲಕ ಸಾಧನೆಗೈದಿದ್ದಾನೆ.
ಕೈಗಳ ಅಂಗ ವೈಕಲ್ಯತೆಯನ್ನು ಹೊಂದಿ ಕಾಲಿನಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ರಾಜ್ಯ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರ ಗಮನವನ್ನೂ ಸೆಳೆದಿದ್ದ. ಈತ ಪರೀಕ್ಷೆ ಬರೆಯುತ್ತಿದ್ದ ಫೋಟೋವನ್ನು ಸ್ವತಃ ಸುರೇಶ್ ಕುಮಾರ್ ಟ್ವಿಟರ್‍ನಲ್ಲಿ ಹಂಚಿಕೊಂಡು ಶುಭ ಹಾರೈಸಿದ್ದರು.
ಕೌಶಿಕ್ ಕಾಲಿನಲ್ಲೇ ಪರೀಕ್ಷೆ ಬರೆಯುವ ಚಿತ್ರ ಸಮೇತ ಟ್ವೀಟ್ ಮಾಡಿದ್ದ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ “ಬಂಟ್ವಾಳ ತಾಲೂಕಿನ ಎಸ್‍ವಿಎಸ್ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೆ ಕಾಲಿನ ಬೆರಳುಗಳ ಮೂಲಕವೇ ಉತ್ತರ ಬರೆದ ಈ ಪೋರ ಕೌಶಿಕ್‍ನಿಗೆ ನನ್ನ ಹೃದಯಪೂರ್ವಕ ಮೆಚ್ಚುಗೆ. ಇಂತಹ ವ್ಯಕ್ತಿಗಳು ಬದುಕಿನ ಸಾರ್ಥಕ ಅರ್ಥ ಕಲ್ಪಿಸುತ್ತಾರೆ. ಸಮಾಜದ ಎಲ್ಲ ಮಾನವೀಯ ನಿಲುವುಗಳನ್ನು ಸಮರ್ಥಿಸುತ್ತಾರೆ” ಎಂದು ಟ್ವೀಟ್ ಮಾಡಿದ್ದರು.
ಇದೀಗ ಕೌಶಿಕ್ ಮುಂದಿನ ವರ್ಷ ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಂಡು ಪಿಯುಸಿ ವ್ಯಾಸಂಗ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾನೆ.
0 comments:
Post a Comment