ನವದೆಹಲಿ (ಕರಾವಳಿ ಟೈಮ್ಸ್) : ಜೆಇಇ ಹಾಗೂ ನೀಟ್ ಪರೀಕ್ಷೆಗಳನ್ನು ವಿಳಂಬ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿ ದೇಶ-ವಿದೇಶಗಳ 150ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದ್ದಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಜೆಇಇ ಮತ್ತು ನೀಟ್ ಪರೀಕ್ಷೆ ನಡೆಸುವುದಕ್ಕೆ ವಿರೋಧ ಕೇಳಿ ಬರುತ್ತಿರುವುದರ ಮಧ್ಯೆ ಶಿಕ್ಷಣ ತಜ್ಞರು ಈ ಪತ್ರ ಬರೆದಿದ್ದಾರೆ. ರಾಜಕೀಯ ಹಿತಾಸಕ್ತಿ ದೃಷ್ಟಿಯನ್ನಿಟ್ಟುಕೊಂಡು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ಅವರು ಬೊಟ್ಟು ಮಾಡಿದ್ದಾರೆ.
ಇಂದಿನ ಯುವಕರು ಮತ್ತು ವಿದ್ಯಾರ್ಥಿಗಳು ದೇಶದ ಭವಿಷ್ಯ ಆಗಿದ್ದು ಕೋವಿಡ್-19 ಸಾಂಕ್ರಾಮಿಕ ವೈರಸ್ ನಡುವೆ ಅವರ ಭವಿಷ್ಯ, ವೃತ್ತಿಯ ಬಗ್ಗೆ ಅನಿಶ್ಚಿತತೆ ಉಂಟಾಗಿದೆ. ಈ ವರ್ಷದ ಶೈಕ್ಷಣಿಕ ಸಾಲಿನ ಪ್ರವೇಶ ಮತ್ತು ತರಗತಿಗಳ ಬಗ್ಗೆ ಸಾಕಷ್ಟು ಅನುಮಾನಗಳು ಎದ್ದಿರುವಾಗ ಅವುಗಳನ್ನು ಆದಷ್ಟು ಬೇಗನೆ ಬಗೆಹರಿಸಿಕೊಳ್ಳಬೇಕಿದೆ ಎಂದು ಪತ್ರದಲ್ಲಿ ಶಿಕ್ಷಣ ತಜ್ಞರು ಹೇಳಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷ ಕೂಡ ಲಕ್ಷಾಂತರ ವಿದ್ಯಾರ್ಥಿಗಳು 12ನೇ ತರಗತಿ ಮುಗಿಸಿ ಮುಂದಿನ ಭವಿಷ್ಯವನ್ನು ರೂಪಿಸಲು ಕಾಯುತ್ತಿದ್ದಾರೆ. ಸರಕಾರ ಈಗಾಗಲೇ ಜೆಇಇ ಮತ್ತು ನೀಟ್ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿ ಸಿದ್ದತೆ ಮಾಡಿಕೊಂಡಿದೆ. ಹೀಗಿರುವಾಗ ಮತ್ತಷ್ಟು ವಿಳಂಬ ಮಾಡಿದರೆ ವಿದ್ಯಾರ್ಥಿಗಳ ಅಮೂಲ್ಯ ಒಂದು ವರ್ಷ ಹಾಳಾಗುತ್ತದೆ. ಯುವಜನತೆ, ವಿದ್ಯಾರ್ಥಿಗಳ ಕನಸಿನ ಜೊತೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಸರಕಾರವನ್ನು ವಿರೋಧಿಸಲು ಪರೀಕ್ಷೆ ಮಾಡಬಾರದೆಂದು ವಿರೋಧಿಸಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
0 comments:
Post a Comment