ನವದೆಹಲಿ (ಕರಾವಳಿ ಟೈಮ್ಸ್) : ಕೊರೋನಾ ಲಾಕ್‍ಡೌನ್ ಕಾರಣಕ್ಕಾಗಿ ಹೇರಲಾಗಿದ್ದ ಅಂತರ್ ರಾಜ್ಯ ಪ್ರಯಾಣದ ಮೇಲಿನ ನಿರ್ಬಂಧವನ್ನು ತೆರವು ಮಾಡುವಂತೆ ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರ ಶನಿವಾರ ಸೂಚನೆ ನೀಡಿದೆ.
ಈ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಶನಿವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ಪತ್ರ ಬರೆದಿದ್ದು, ಅನ್‍ಲಾಕ್-3ಗಾಗಿ ಕೇಂದ್ರ ಮಾರ್ಗಸೂಚಿಗಳ ಅಡಿಯಲ್ಲಿ ಅಥವಾ ಕೊರೋನಾ ವೈರಸ್ ಲಾಕ್‍ಡೌನ್ ಸರಾಗಗೊಳಿಸುವ 3ನೇ ಹಂತದ ಅಡಿಯಲ್ಲಿ, ಅಂತರ್ ರಾಜ್ಯ ಅಥವಾ ರಾಜ್ಯದೊಳಗಿನ ಯಾವುದೇ ಜನರು ಅಥವಾ ಸರಕುಗಳ ಪ್ರಯಾಣಕ್ಕೆ ನಿರ್ಬಂಧಗಳಿಲ್ಲ. ಕೂಡಲೇ ಈ ನಿರ್ಬಂಧ ಸಡಿಲಗೊಳಿಸಿ. ವ್ಯಕ್ತಿಗಳು ಅಥವಾ ಸರಕುಗಳ ಚಲನೆಗೆ ಪ್ರತ್ಯೇಕ ಅನುಮತಿ ಅಥವಾ ಇ-ಪರ್ಮಿಟ್ ಅಗತ್ಯವಿಲ್ಲ ಎಂದು ತಿಳಿಸಿದೆ.
ಅದೇ ರೀತಿ ಅಂತರ್ ರಾಜ್ಯ ಪ್ರಯಾಣ ನಿರ್ಬಂಧ ಕುರಿತಂತೆ ಕೆಲ ರಾಜ್ಯ ಸರಕಾರಗಳ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿರುವ ಗೃಹ ಇಲಾಖೆ, ‘ಹಲವಾರು ರಾಜ್ಯಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಇಂತಹ ನಿರ್ಬಂಧಗಳನ್ನು ವಿಧಿಸುತ್ತಿದ್ದಾರೆ ಎಂಬ ವರದಿಗಳಿವೆ. ಈ ನಿರ್ಬಂಧಗಳು ಪೂರೈಕೆ ಸರಪಳಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಮತ್ತು ಆ ಮೂಲಕ ಆರ್ಥಿಕ ಚಟುವಟಿಕೆ ಮತ್ತು ಉದ್ಯೋಗಕ್ಕೆ ಅಡ್ಡಿಪಡಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇಂತಹ ನಿರ್ಬಂಧಗಳನ್ನು ನಿರಂತರವಾಗಿ ಹೇರುವುದು ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಹೊರಡಿಸಲಾದ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಯಾವುದಾದರೂ ಸಂಚಾರ ನಿರ್ಬಂಧಗಳಿದ್ದರೆ ತೆಗೆದು ಹಾಕಿ ಮತ್ತು ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಭಲ್ಲಾ ಅವರು ತಮ್ಮ ಪತ್ರದಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒತ್ತಾಯಿಸಿದ್ದಾರೆ.
0 comments:
Post a Comment