ಭಿಕ್ಷೆ ಬೇಡಲು ಮನೆ ಬಾಗಿಲಿಗೆ ಬಂದ ಭಿಕ್ಷುಕ ಮನೆಯ ಯಜಮಾನತ್ವವನ್ನು ಪಡೆದಂತೆ ಭಾರತದ ಹೇರಳ ಸಂಪತ್ತನ್ನು ಕಂಡು ವ್ಯಾಪಾರದ ಉದ್ದೇಶವನ್ನಿಟ್ಟುಕೊಂಡು ಭಾರತಕ್ಕೆ ಬಂದ ಬ್ರಿಟಿಷರು ತಮ್ಮ ಜಾಣ್ಮೆ, ದಬ್ಬಾಳಿ-ಕ್ರೌರ್ಯದಿಂದ ಇಡೀ ದೇಶದ ಅಧಿಪತ್ಯವನ್ನು ಸ್ಥಾಪಿಸಿದ ಕತೆ ಪ್ರತೀ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲೂ ಭಾಷಣದ ರೂಪದಲ್ಲಿ ಮೊಳಗುತ್ತಲೇ ಇದೆ. ಈ ರೀತಿಯಾಗಿ ಭಾರತಕ್ಕೆ ಬಂದ ಬ್ರಿಟಿಷರು ಬಳಿಕ ಸಮಸ್ತ ಭಾರತೀಯರನ್ನು ಗುಲಾಮರನ್ನಾಗಿಸಿ ದೇಶವನ್ನಾಳಿದ ಬಿಳಿಯರನ್ನು ಒದ್ದೋಡಿಸಲು ಭಾರತೀಯರು ಸುದೀರ್ಘ ಕಾಲದ ಹೋರಾಟವನ್ನು ನಡೆಸಬೇಕಾಗಿ ಬಂದಿರುವುದೆಲ್ಲಾ ಇದೀಗ ಇತಿಹಾಸ.
ವರ್ಷಾನುಗಟ್ಟಲೆ ಬ್ರಿಟಿಷರ ದಾಸ್ಯದಲ್ಲಿ ಜೀವಿಸಿದ ಭಾರತೀಯರಿಗೆ ಕಾಲಕ್ರಮೇಣ ಇವರ ದಬ್ಬಾಳಿಕೆ, ಕ್ರೌರ್ಯ ಹೆಚ್ಚಾಗತೊಡಗಿದಾಗ ವಿವಿಧ ಕಾರಣಗಳಿಂದ ವಿವಿಧ ಸಂದರ್ಭಗಳಲ್ಲಿ ಬ್ರಿಟಿಷರ ಮೇಲೆ ಅಸಹಕಾರ, ದ್ವೇಷದ ಕಿಡಿಗಳು ಹೊತ್ತತೊಡಗಿತು. ಪರಿಣಾಮ ಹಂತ ಹಂತವಾಗಿ ಬ್ರಿಟಿಷರನ್ನು ಈ ದೇಶದಿಂದ ಹೊಡೆದೋಡಿಸಲು ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಿದರು. ಇನ್ನೇನು ಭಾರತೀಯರು ತಮ್ಮ ವಿರುದ್ದ ಸಿಡಿದೆದ್ದಿದ್ದಾರೆ ಎಂಬುದನ್ನು ಶುದ್ದವಾಗಿ ಮನಗಂಡ ಆಂಗ್ಲರು ಭಾರತೀಯರ ಮೇಲೆ ನೇರವಾಗಿ ದಬ್ಬಾಳಿಕೆ ನಡೆಸಿದರೆ ನಮ್ಮ ಉದ್ದೇಶ ಈಡೇರದು ಎಂದರಿತು ಭಾರತೀಯ ಪ್ರಜೆಗಳನ್ನೇ ಜಾತಿ-ಧರ್ಮದ ಆಧಾರದಲ್ಲಿ ವಿಭಜಿಸಿ ಮತೀಯ ವಿಷ ಬೀಜವನ್ನು ಜನರ ತಲೆಗೆ ಪರಿಣಾಮಕಾರಿಯಾಗಿ ತುರುಕಿಸಿ ಆ ಮೂಲಕ ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಪ್ರಯತ್ನಿಸಿದರು.
ಆದರೆ ಹಲವು ರೀತಿಯ ಮರ್ದನಗಳಿಂದ ಬೇಸತ್ತಿದ್ದ ಭಾರತೀಯ ಪೌರರು ಇಂಗ್ಲಿಷರ ಯಾವುದೇ ಕುತಂತ್ರಗಳಿಗೂ ಕಿವಿಗೊಡುವ ಕಾಲ ಮೀರಿತ್ತು. ಬ್ರಿಟಿಷರ ಉದ್ದೇಶವನ್ನು ಅರಿತ ಭಾರತೀಯರು ಇವರನ್ನು ಈ ದೇಶದಿಂದಲೇ ಗಡೀಪಾರು ಮಾಡಲು ಜಾತಿ-ಮತ-ಧರ್ಮದ ಎಲ್ಲೆಗಳನ್ನು ಮೀರಿ ಒಂದಾಗಿದ್ದರು. ಹಿಂದೂ-ಮುಸ್ಲಿಂ ಸಂಯುಕ್ತ ಹೋರಾಟ ಮಾತ್ರ ಈ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಡಬಲ್ಲುದು ಎಂಬುದು ಭಾರತೀಯರಿಗೆ ಸ್ಪಷ್ಟವಾಗಿ ಮನವರಿಕೆಯಾಗಿತ್ತು. ಇದರ ಪರಿಣಾಮವಾಗಿ 1921 ರಂದು ಕರಾಚಿಯಲ್ಲಿ ಜರುಗಿದ ದೇಶದ ಸ್ವಾಂತಂತ್ರ್ಯ ಹೋರಾಟಕ್ಕೆ ಪ್ರಬಲ ಕಿಡಿ ಹೊತ್ತಿಸಿದ ಖಿಲಾಫತ್ ಚಳುವಳಿಯ ಪೂರ್ವಭಾವಿಯಾಗಿ ನಡೆದ ಖಿಲಾಫತ್ ಸಮ್ಮೇಳನದಲ್ಲಿ ಮೌಲಾನಾ ಮುಹಮ್ಮದ್ ಅಲಿ ಜೌಹರ್ ಅವರು “ಬ್ರಿಟಿಷರ ಸರಕಾರದ ಅಧೀನದಲ್ಲಿರುವ ಸೇನೆಯಲ್ಲಿ ನೌಕರಿಯನ್ನು ನಿರ್ವಹಿಸುವುದು ಯಾವುದೇ ಕಾರಣಕ್ಕೂ ಭಾರತೀಯ ಮುಸ್ಲಿಮರಿಗೆ ನಿಷಿದ್ಧ ಹಾಗೂ ಧರ್ಮ ಬಾಹಿರ” ಎಂದು ಘಂಟಾಘೋಷವಾಗಿ ಸಾರಿದರು. ಮೌಲಾನಾ ಜೌಹರ್ ಅವರ ಈ ಘೋಷಣೆಯನ್ನು ಸಮ್ಮೇಳನ ಠರಾವಿನ ಮೂಲಕ ಅಂಗೀಕರಿಸಿತು.
ಅದೇ ರೀತಿ ಪುರಿ ಶಂಕರಾಚಾರ್ಯರಾಗಿದ್ದ ಸ್ವಾಮಿ ಭಾರತಿ ಕೃಷ್ಣ ತೀರ್ಥರು “ಬ್ರಿಟಿಷ್ ಸರಕಾರದ ಸೇನೆಯಲ್ಲಿ ನೌಕರಿ ನಿರ್ವಹಿಸುವುದು ಹಿಂದು ಧರ್ಮದ ಪ್ರಕಾರ ಹಿಂದುಗಳ ಪಾಲಿಗೂ ನಿಷಿದ್ದ” ಎಂದು ಸ್ಪಷ್ಟವಾಗಿ ಘೋಸಿಸಿದರು. ಈ ಉಭಯ ನಾಯಕರ ಘೋಷಣೆಯಿಂದ ಕಕ್ಕಾಬಿಕ್ಕಿಯಾದ ಇಂಗ್ಲಿಷ್ ಸರಕಾರ ಮೌಲಾನಾ ಜೌಹರ್ ಮತ್ತು ಶಂಕರಾಚಾರ್ಯರನ್ನು ಬಂಧಿಸಿ ದಂಡಿಸಿತು ಎಂಬುದು ಇತಿಹಾಸವಷ್ಟೆ.
ಅದೂ ಅಲ್ಲದೆ ಮುಸ್ಲಿಮರಿಗೆ ಬ್ರಿಟಿಷರೊಂದಿಗೆ ಎಷ್ಟರ ಮಟ್ಟಿಗೆ ಅಸಹಕಾರ ಇತ್ತೆಂದರೆ 1919 ರಲ್ಲಿ ಆರಂಭಗೊಂಡ ಮುಸ್ಲಿಂ ಧರ್ಮಗುರುಗಳ ಅಧಿಕೃತ ಬಲಿಷ್ಠ ಜನಬೆಂಬಲವಿರುವ ಧಾರ್ಮಿಕ ಸಂಘಟನೆ ಜಂ-ಇಯ್ಯತುಲ್ ಉಲಮಾ 1920 ರಲ್ಲಿ ದೇವಬಂದ್‍ನಲ್ಲಿ ಮೌಲಾನಾ ಮುಹಮ್ಮದ್ ಹುಸೇನ್ ರವರ ನೇತೃತ್ವದಲ್ಲಿ ನಡೆದ ಸಮ್ಮೇಳನದಲ್ಲಿ ಬ್ರಿಟಿಷ್ ಸರಕಾರದೊಂದಿಗೆ ಯಾವುದೇ ರೀತಿಯ ಸಹಕಾರವನ್ನು ಮುಸ್ಲಿಮರು ತೋರಿಸಬಾರದು, ದೇಶದ ಎಲ್ಲ ಮುಸ್ಲಿಮರು ಇಂಗ್ಲಿಷ್ ಸರಕಾರದಿಂದ ಪಡೆದ ಗೌರವ, ಪದವಿ, ಪ್ರಶಸ್ತಿಗಳನ್ನು ಹಿಂದಕ್ಕೆ ಬಿಟ್ಟುಕೊಡಬೇಕು, ವಿದೇಶಿ ವಸ್ತುಗಳನ್ನು ಬಹಿಷ್ಕರಿಸಬೇಕು, ಸರಕಾರದ ಅನುದಾನದಿಂದ ನಡೆಯುವ ಶಾಲಾ-ಕಾಲೇಜುಗಳನ್ನು ಬಿಟ್ಟುಕೊಡಬೇಕು ಎಂಬಂತಹ ಮಹತ್ವದ ನಿರ್ಣಯಗಳನ್ನು ಕೈಗೊಂಡಿತು. ಮಾತ್ರವಲ್ಲ ಮುಸ್ಲಿಮರ ಎಲ್ಲಾ ರೀತಿಯ ಸಮಸ್ಯೆಗಳಿಗೆ ಶೈಕ್ಷಣಿಕ ಹಿಂದುಳಿಕೆಯೇ ಮುಖ್ಯ ಕಾರಣ ಎಂಬುದರ ಅರಿವಿದ್ದರೂ, ಬ್ರಿಟಿಷರೊಂದಿಗಿರುವ ಅಸಹಕಾರ ಅದನ್ನೂ ಗಣನೆಗೆ ತೆಗೆದುಕೊಳ್ಳದೆ ಇಂಗ್ಲೀಷ್ ಶಿಕ್ಷಣ ಮುಸ್ಲಿಮರ ಪಾಲಿಗೆ ನಿಷಿದ್ದ ಎಂಬ ಧೋರಣೆಯನ್ನು ಮುಸ್ಲಿಂ ನಾಯಕರು ತಳೆಯುವಷ್ಟರ ಮಟ್ಟಿಗೆ ಮುಂದುವರಿದಿತ್ತು.
ಈ ರೀತಿಯಾಗಿ ಅಂದು ಬ್ರಿಟಿಷರಿಂದ ಈ ದೇಶವನ್ನು ಮುಕ್ತಗೊಳಿಸಲು ದೇಶದ ಹಿಂದೂ-ಮುಸ್ಲಿಂ ನಾಯಕರು ಜಂಟಿಯಾಗಿ ನಿಯಮಗಳನ್ನು ಘೋಷಿಸಿ ಬ್ರಿಟಿಷರ ವಿರುದ್ದ ಹೋರಾಟಕ್ಕೆ ಕರೆಕೊಟ್ಟು, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರೆ, ಅದೇ ಇಂದು ಬ್ರಿಟಿಷರು ಬಿಟ್ಟು ಹೋದ ವಿಭಜನೆಯ ತತ್ವವನ್ನು ಮಾತ್ರ ಇಂದಿನ ಭಾರತೀಯರು ಬಳುವಳಿಯಾಗಿ ಇಟ್ಟುಕೊಂಡಿರುವುದು ದುರದೃಷ್ಟಕರ ಎನ್ನದೆ ವಿಧಿಯಿಲ್ಲ. ಇವತ್ತು ದೇಶದ ಪ್ರಜೆಗಳು ಜಾತಿ-ಮತ-ಧರ್ಮದ ಆಧಾರದಲ್ಲಿ ವಿಭಜನೆಗೊಂಡು ಆಂತರಿಕವಾಗಿ ಕಚ್ಚಾಡುತ್ತಾ ದೇಶದ ಸುಂದರ ಸೌಹಾರ್ದ ಪರಂಪರೆಗೆ ಧಕ್ಕೆ ತರುವಂತಹ ಸನ್ನಿವೇಶಗಳನ್ನು ಸೃಷ್ಟಿಸುತ್ತಿರುವುದು ಈ ದೇಶದ ದೌರ್ಭಾಗ್ಯವೇ ಸರಿ.
ಅಂದು ಜಾತಿ-ಮತ ಬೇಧ ಮರೆತು ಪ್ರದರ್ಶಿಸಿದ ಒಗ್ಗಟ್ಟಿನ ಫಲವಾಗಿ ಪಡೆದ ಸ್ವಾತಂತ್ರ್ಯವನ್ನು ಇಂದು ಜಾತಿ-ಧರ್ಮದ ರೇಖೆಯೊಳಗೆ ಆಚರಿಸುವ ಪ್ರಯತ್ನಗಳು ನಡೆಯುತ್ತಿವೆ. ಒಂದು ಧರ್ಮದ ಪ್ರತಿನಿಧಿಗಳು ಸೇರಿ ಆಚರಿಸುವ ಸ್ವಾತಂತ್ರ್ಯೋತ್ಸವದಲ್ಲಿ ಇನ್ನೊಂದು ಧರ್ಮಕ್ಕೆ ಸೇರಿದ ಹುತಾತ್ಮ ಪಾತ್ರಗಳನ್ನು ಕತ್ತಲಲ್ಲಿಡುವ ಪ್ರಸಂಗಗಳೇ ನಡೆಯುತ್ತಿವೆ. ಈ ರೀತಿಯ ಆಚರಣೆಗಳಿಂದ ಪರಕೀಯರ ಆಳ್ವಿಕೆಯಿಂದ ಮುಕ್ತವಾಗಿ ಈ ದೇಶ ಸ್ವಾತಂತ್ರ್ಯವನ್ನು ಪಡೆದಿದೆಯಾದರೂ, ಆಂತರಿಕವಾಗಿ ಜಾತಿ-ಧರ್ಮಗಳ ಕಪಿಮುಷ್ಠಿಯಲ್ಲಿ ಬಂಧಿಯಾಗುವಂತಾಗಿದೆ. ಪರಕೀಯರ ಆಳ್ವಿಕೆಗಿಂತಲೂ ಈ ಆಂತರಿಕ ಕಚ್ಚಾಟಗಳು ದೇಶದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಬಹಳಷ್ಟು ಅಪಾಯಕಾರಿ ಎಂಬುದನ್ನು ಈ ದೇಶದ ಸುಂದರ ಭವಿಷ್ಯವನ್ನು ಎದುರು ನೋಡುತ್ತಿರುವ ಪ್ರತಿಯೊಬ್ಬ ಭಾರತೀಯನೂ ಮನಗಾಣಲೇಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರನ್ನು ಸೇರಿಸಿಕೊಂಡು, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಎಲ್ಲ ಜಾತಿ-ಧರ್ಮಗಳ ಹುತಾತ್ಮ ವ್ಯಕ್ತಿತ್ತಗಳನ್ನು ಸ್ಮರಿಸಿಕೊಂಡು ಆಚರಿಸುವ ಸ್ವಾತಂತ್ರ್ಯೋತ್ಸವಗಳು ನಮ್ಮದಾಗಲಿ ಎಂಬುದೇ ಕರಾವಳಿ ಟೈಮ್ಸ್ ಪತ್ರಿಕೆಯ ಹಾರೈಕೆ.
0 comments:
Post a Comment