ಎರಡು ಮನೆಗಳ ಮೇಲೆ ಗುಡ್ಡ ಕುಸಿತ, ನಾಲ್ವರು ನಾಪತ್ತೆ ಶಂಕೆ, ಎನ್‍ಡಿಆರ್‍ಎಫ್ ತಂಡದಿಂದ ಕಾರ್ಯಾಚರಣೆ ಆರಂಭ
ಮಡಿಕೇರಿ (ಕರಾವಳಿ ಟೈಮ್ಸ್) : ಕೊಡಗು ಜಿಲ್ಲೆಯಲ್ಲಿ ಆಶ್ಲೇಷ ಮಳೆ ಜೋರಾಗಿಯೇ ಆರ್ಭಟಿಸುತ್ತಿದೆ. ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿದಿದ್ದು, ಎರಡು ಮನೆಗಳ ನಾಲ್ವರು ನಾಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಎನ್‍ಡಿಆರ್‍ಎಫ್ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿದೆ.
ಘಟನೆ ಕುರಿತು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ನಿನ್ನೆ ತಡರಾತ್ರಿ ಸುರಿದ ಮಳೆಗೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ತಲಕಾವೇರಿಯ ದೇವಸ್ಥಾನದ ಅರ್ಚಕರ ಎರಡು ಮನೆಗಳ ಮೇಲೆ ಬಿದ್ದಿದೆ. ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದೆ.
ಸಿಬ್ಬಂದಿ ನೀಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಎರಡು ಮನೆಗಳ ಪೈಕಿ ಒಬ್ಬರು ಅರ್ಚಕರು ಹೊಸ ಮನೆ ನಿರ್ಮಿಸಿಕೊಂಡು ಕುಟುಂಬದೊಂದಿಗೆ ಭಾಗಮಂಡಲದಲ್ಲಿ ನೆಲೆಸಿದ್ದಾರೆ. ತಲಕಾವೇರಿಯ ಮನೆ ಖಾಲಿ ಇದೆ. ಇನ್ನೊಬ್ಬ ಅರ್ಚಕರು ತಲಕಾವೇರಿಯ ಮನೆಯಲ್ಲಿಯೇ ಕುಟುಂಬದೊಂದಿಗೆ ವಾಸವಿದ್ದರು. ಈ ಕುಟುಂಬದ 4 ಜನ ಕಾಣೆಯಾಗಿರುವ ಮಾಹಿತಿ ಇದೆ. ಜಿಲ್ಲೆಯ ಅಡ್ವಾನ್ಸ್ ರೆಸ್ಕ್ಯೂ ಟೀಂ ಸ್ಥಳಕ್ಕೆ ಧಾವಿಸುತ್ತಿದ್ದು, ಪರಿಶೀಲನೆ ನಂತರ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮಳೆಯಿಂದಾಗಿ ರಸ್ತೆ ಸಂಪರ್ಕವೂ ಸಂಪೂರ್ಣ ಕಡಿತವಾಗಿದ್ದು, ತ್ರಿವೇಣಿ ಸಂಗಮ ಮುಳುಗಡೆ ಆಗಿರುವ ಹಿನ್ನೆಲೆ ದೇವಾಲಯ ಸಿಬ್ಬಂದಿ ತಲಕಾವೇರಿ ಸನ್ನಿಧಿಯಲ್ಲಿ ಸಿಲುಕಿದ್ದಾರೆ.
0 comments:
Post a Comment