ತುಂಬಿ ಹರಿಯುತ್ತಿರುವ ಕುಮಾರಧಾರಾ, ನೇತ್ರಾವತಿ ನದಿಗಳು
ಮಂಗಳೂರು (ಕರಾವಳಿ ಟೈಮ್ಸ್) : ರಾಜ್ಯದ ಪಶ್ಚಿಮ ಘಟ್ಟಗಳು ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಕಳೆದ ಎರಡು-ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಭೀತಿ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪರಿಸರದಲ್ಲೂ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಕುಮಾರಧಾರ ನದಿಯ ಹೊಸಮಠ ಹಾಗೂ ನೇತ್ರಾವತಿ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿ ಹರಿಯುತ್ತಿದೆ. ಮಳೆ ಮತ್ತಷ್ಟು ತೀವ್ರವಾಗಿ ಮುಂದುವರಿದರೆ ತಗ್ಗು ಪ್ರದೇಶದ ಹಲವಾರು ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ನದಿ ತೀರದ ಬಹುತೇಕ ಎಲ್ಲಾ ಕೃಷಿ ಭೂಮಿಗಳಿಗೂ ನೀರು ನುಗ್ಗಿ ಮುಳುಗುತ್ತಿವೆ. ಬಂಟ್ವಾಳ ತಾಲೂಕಿನ ಜೀವ ನದಿ ನೇತ್ರಾವತಿಯೂ ಮಂಗಳವಾರದಿಂದ ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೆ ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ ಮಿಲಿಟ್ರಿ ಕ್ಯಾಂಪಿಂಗ್ ಮೈದಾನದಲ್ಲಿ ತಾತ್ಕಾಲಿಕ ವಾಸ್ತವ್ಯ ಹೂಡಿರುವ ನಿವಾಸಿಗಳು ಬುಧವಾರ ತಡ ರಾತ್ರಿ ವೇಳೆಗೆ ತಮ್ಮ ಗುಳೇ ಹೊರಟಿದ್ದಾರೆ. ಅದೇ ಚಾರ್ಮಾಡಿಯಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಇಲ್ಲಿನ ಅಂತರ-ಅರಣ್ಯಪಾದೆ ಸಂಪರ್ಕ ಸೇತುವೆ ಮುಳಗಡೆಯಾಗಿ ವಾಹನ ಹಾಗೂ ಜನ ಸಂಚಾರ ಸ್ಥಗಿತಗೊಂಡಿದೆ.
ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗುತ್ತಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇನ್ನೆರಡು ದಿನ ಮಳೆ ಮುಂದುವೆರೆಯುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
0 comments:
Post a Comment