ಮಂಗಳೂರು (ಕರಾವಳಿ ಟೈಮ್ಸ್) : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಮಂಗಳವಾರ ಸಂಜೆಯಿಂದ ಬುಧವಾರ ರಾತ್ರಿವರೆಗೂ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ ಈ ಸಂದರ್ಭ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಬುಧವಾರದಿಂದ ಆಗಸ್ಟ್ 9ರವರೆಗೂ ಆರೆಂಜ್ ಅಲರ್ಟ್ ಘೋಷಿಸಿದ್ದು ಈ ಎಲ್ಲಾ ದಿನದಲ್ಲಿ ಕರಾವಳಿಯಾದ್ಯಂತ ಮೀನುಗಾರಿಕೆ ಸಂಪೂರ್ಣವಾಗಿ ನಿಷೇಧಿಸಲು ಸೂಚಿಸಿದೆ.
ಸಮುದ್ರ ಹಾಗೂ ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಹಾಗೂ ಮೀನುಗಾರರು ಮೀನುಗಾರಿಕೆ ನಡೆಸದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಕೊಡಗು ಜಿಲ್ಲೆಯ 15 ಪಂಚಾಯ್ತಿ ವ್ಯಾಪ್ತಿಯಲ್ಲಿ 100 ಮಿಲಿ ಮೀಟರ್ ಗೂ ಅಧಿಕ ದಾಖಲೆ ಮಳೆಯಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಸೂಚಿಸಿದೆ.
ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಗುಡ್ಡ ಕುಸಿತವಾಗಿದೆ. ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿಯಲ್ಲಿ ಗುಡ್ಡ ಕುಸಿತವಾಗಿದೆ.
ಬಂಟ್ವಾಳದಲ್ಲೂ ಮಂಗಳವಾರ ದಿನವಿಡೀ ಭಾರೀ ಮಳೆಯಾಗಿದ್ದು, ಕೆಲವೊಂದು ಅವಘಡಗಳೂ ವರದಿಯಾಗಿವೆ. ತಾಲೂಕಿನ ಜೀವನದಿ ನೇತ್ರಾವತಿ ತುಂಬಿ ಹರಿಯುತ್ತಿದೆ. ಮಂಗಳವಾರ ಸಂಜೆಯವರೆಗೆ 64.4 ಮಿಮೀ ಮಳೆಯಾಗಿದ್ದು, ನೇತ್ರಾವತಿ ನೀರಿನ ಮಟ್ಟ 6 ಮೀಟರ್ ಗೇರಿದೆ ಎಂದು ತಾಲೂಕಾಡಳಿತದ ಪ್ರಕಟಣೆ ತಿಳಿಸಿದೆ. ಅಪಾಯದ ಮಟ್ಟ 8.5 ಮೀಟರ್ ಆಗಿದೆ. ಕಳೆದ ವರ್ಷ ಈ ಸಮಯದಲ್ಲಿ ಬಂಟ್ವಾಳದಲ್ಲಿ ನೇತ್ರಾವತಿ ಅಪಾಯದ ಮಟ್ಟ ಮೀರಿ ಹರಿದಿತ್ತು.
0 comments:
Post a Comment