ಚಾಮರಾಜನಗರ (ಕರಾವಳಿ ಟೈಮ್ಸ್) : ಚಾಮರಾಜನಗರ ಮಾಜಿ ಶಾಸಕ, ಬಿಜೆಪಿ ಮುಖಂಡ ಪಿ. ಗುರುಸ್ವಾಮಿ (68) ಅವರು ಕೊರೋನಾ ವೈರಸ್ಸಿಗೆ ಬಲಿಯಾಗಿದ್ದಾರೆ. ಆಗಸ್ಟ್ 5 ರಂದು ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿದ್ದ ಗುರುಸ್ವಾಮಿಯ ಅವರು ಜನತಾ ಪಕ್ಷ, ಜನತಾದಳದಿಂದ ರಾಜಕೀಯ ಪ್ರವೇಶಿಸಿ, ಮೈಸೂರು ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಏಕೈಕ ಬಿಜೆಪಿ ಶಾಸಕರಾಗಿದ್ದರು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಮೊದಲ ಬಾರಿಗೆ ಗುರುಸ್ವಾಮಿ ಕಮಲದ ಬಾವುಟ ಹಾರಿಸಿದ್ದರು.
1999-2004 ಎರಡು ಅವಧಿಯಲ್ಲಿ ಶಾಸಕರಾಗಿದ್ದ ಗುರುಸ್ವಾಮಿ ಬಳಿಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲ ಸಮಯ ಸೇವೆ ಸಲ್ಲಿಸಿದ್ದ ಅವರು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿ ಜಿಲ್ಲೆಯ ಪ್ರಭಾವಿ ಬಿಜೆಪಿ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಯಾನಗಹಳ್ಳಿಯ ತೋಟದಲ್ಲಿ ಕೋವಿಡ್ ಶಿಷ್ಟಾಚಾರದಂತೆ ನಡೆಯಲಿದೆ ಎಂದು ತಿಳಿದು ಬಂದಿದೆ.
0 comments:
Post a Comment