ರಸ್ತೆ ಸುರಕ್ಷತೆಗೆ ಯಾವುದೇ ಕ್ರಮ ಇಲ್ಲದೆ, ಸಂಬಂಧಪಟ್ಟ ಇಲಾಖೆಗಳ ಎನ್.ಒ.ಸಿ.ಯೂ ಇಲ್ಲದೆ ಬೃಹತ್ ಘಟಕಗಳ ಕಾರ್ಯಾಚರಣೆಗೆ ಸಾರ್ವಜನಿಕ ಆಕ್ರೋಶ ಇದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು-ಜನಪ್ರತಿನಿಧಿಗಳು
ಕಿರು ಸೇತುವೆಗಳ ಪರಿಸ್ಥಿತಿ ಗಂಭೀರ, ಸಾರ್ವಜನಿಕ ಪ್ರತಿಭಟನೆಗೆ ನಿರ್ಧಾರ
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ನಬೈಲು ಸಮೀಪ ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿರುವ ಕಾಂಕ್ರಿಟ್ ಮಿಕ್ಸಿಂಗ್ ಘಟಕದ ಬೃಹತ್ ಗಾತ್ರದ ವಾಹನಗಳು ಎಗ್ಗಿಲ್ಲದೆ ಸಂಚರಿಸುತ್ತಿರುವ ಪರಿಣಾಮ ಇಲ್ಲಿಗೆ ಸಮೀಪದ ಬಂಟ್ವಾಳ ಪುರಸಭಾ ವ್ಯಾಪ್ತಿಗೊಳಪಡುವ ಗುಡ್ಡೆಅಂಗಡಿ ಎಂಬಲ್ಲಿ ಕಿರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸಾರ್ವಜನಿಕರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಸಜಿಪಮುನ್ನೂರು ಗ್ರಾ.ಪಂ.ನ ಯಾವುದೇ ಪರವಾನಿಗೆ ಇಲ್ಲದೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಎನ್.ಒ.ಸಿ.ಯನ್ನೂ ಪಡೆಯದೆ ಮಾರ್ನಬೈಲ್ ಎಂಬಲ್ಲಿ ಎಲ್ಲಿಯದೋ ರಸ್ತೆಗೆ ಕಾಂಕ್ರಿಟ್ ಹಾಕಲು ಮಿಕ್ಸಿಂಗ್ ಘಟಕ ಇಲ್ಲಿ ಕಳೆದ ಕೆಲ ಸಮಯಗಳಿಂದ ಕಾರ್ಯಾಚರಣೆ ನಡೆಸುತ್ತಿದೆ. ಇಲ್ಲಿಗೆ ಬರುವ ಬೃಹತ್ ವಾಹನಗಳಿಂದ ಈ ಪ್ರದೇಶದ ರಸ್ತೆ, ಸೇತುವೆಗಳಿಗೆ ಉಳಿಗಾಲ ಇಲ್ಲದಂತಾಗುತ್ತಿದೆ. ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕೆಸರಿನ ಸಮಸ್ಯೆಯನ್ನು ಇಲ್ಲಿನ ಜನ ನಿರಂತರವಾಗಿ ಅನುಭವಿಸುತ್ತಲೇ ಇದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ದೂರಿಕೊಂಡರೆ ಅದೆಲ್ಲ ಪ್ರಭಾವಿಗಳದ್ದು ಹಾಗೂ ಅವರಿಗೆ ರಾಜಕಾರಣಿಗಳ ಹಾಗೂ ಜನಪ್ರತಿನಿಧಿಗಳ ಕೃಪಾಕಟಾಕ್ಷವೂ ಇರುವುದರಿಂದ ಯಾವುದೇ ಕ್ರಮ ಕೈಗೊಳ್ಳಲು ನಮ್ಮ ಕೈ ಕಾಲು ಕಟ್ಟಿ ಹಾಕಲಾಗಿದೆ ಎಂಬ ಉತ್ತರ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಖಾಸಗಿ ಕಂಪೆನಿಗಳು ಇಂತಹ ಪರವಾನಿಗೆ ರಹಿತ ಘಟಕಗಳನ್ನು ಮಾತ್ರ ನಡೆಸುತ್ತದೆಯೇ ಹೊರತು ಕಾರ್ಯಾಚರಣೆ ಸಂದರ್ಭ ಸ್ಥಳೀಯ ರಸ್ತೆ, ಸೇತುವೆಗಳ ಸುರಕ್ಷತೆ ಹಾಗೂ ಜನರ ಸುರಕ್ಷತೆಗೆ ಯವುದೇ ಕ್ರಮ ಕೈಗೊಳ್ಳದ ಪರಿಣಾಮ ಅವಾಂತರಗಳು, ಅಪಾಯಗಳು ಸಂಭವಿಸುತ್ತವೆ. ಸಾರ್ವಜನಿಕರು ಮುಂಚೆಯೇ ಈ ಬಗ್ಗೆ ಎಚ್ಚರಿಸಿದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಪಾಯ, ಅವಾಂತರಗಳು ಸಂಭವಿಸಿದ ಬಳಿಕ ಕಾರಣ ಹುಡುಕುವ ಕಾರ್ಯ ನಡೆಸುವುದಲ್ಲದೆ ಮೊಸಳೆ ಕಣ್ಣೀರು ಸುರಿಸುವ ಕೆಲಸ ಮಾಡುತ್ತಾರೆ.
ಇದೀಗ ಗುಡ್ಡೆಅಂಗಡಿ ಕಿರು ಸೇತುವೆ ಒಂದು ಬದಿಯಲ್ಲಿ ಬಿರುಕು ಬಿಟ್ಟು ಹೊಂಡದಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಸೇತುವೆಯ ಸುಸ್ಥಿತಿಯ ಬಗ್ಗೆ ಜನ ಆತಂಕಗೊಂಡಿದ್ದಾರೆ. ಸೇತುವೆಯ ಮೇಲೆ ಸಂಚಾರಕ್ಕೂ ಭೀತಿ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಲ್ಲಿನ ತಾಲೂಕು ಕಛೇರಿಯ ಸ್ಥಾನೀಯ ತಹಶೀಲ್ದಾರ್ ಅವರಲ್ಲಿ ವಿಷಯ ತಿಳಿಸಿದರೆ ಅವರು ಈ ಬಗ್ಗೆ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ನಾವೇನಿದ್ದರೂ ಒಂದು ಫೋಟೋ ಕ್ಲಿಕ್ಕಿಸಿ ಜಿಲ್ಲಾಧಿಕಾರಿಗೆ ಕಳುಹಿಸುವ ಪೋಸ್ಟ್ ಮ್ಯಾನ್ ಕೆಲಸವಷ್ಟೆ ಮಾಡಬೇಕಷ್ಟೆ ಎಂಬ ಉಡಾಫೆ ಹಾಗೂ ಬೇಜವಾಬ್ದಾರಿಯಾಗಿ ಮಾತನಾಡುತ್ತಾರೆ ಎಂದು ಇಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಕೊನೆಗೆ ಪಿಡಬ್ಲ್ಯುಡಿ ಅಧಿಕಾರಿಗಳ ಗಮನ ಸೆಳೆದ ಸ್ಥಳಿಯರು ಪರಿಹಾರಕ್ಕೆ ಆಗ್ರಹಿಸಿದ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ತಾತ್ಕಾಲಿಕವಾಗಿ ಹೊಂಡ ಮುಚ್ಚಿ ತೇಪೆ ಹಚ್ಚುವ ಕಾರ್ಯ ಕೈಗೊಂಡಿದ್ದಾರೆ. ಬುಧವಾರ ಈ ಬಗ್ಗೆ ಮಾಹಿತಿ ಪಡೆದ ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ನೇತೃತ್ವದಲ್ಲಿ ಕಂದಾಯ ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
0 comments:
Post a Comment