ನವದೆಹಲಿ (ಕರಾವಳಿ ಟೈಮ್ಸ್) : ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (84) ಚಿಕಿತ್ಸೆ ಫಲಕಾರಿಯಾಗದೆ ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾದರು.
ಪುತ್ರ ಅಭಿಜಿತ್ ಮುಖರ್ಜಿ ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಪ್ರಣಬ್ ಮುಖರ್ಜಿ ತೀವ್ರ ಅಸ್ವಸ್ಥರಾಗಿದ್ದರು. ಆಗಸ್ಟ್ 10 ರಂದು ಬ್ರೇನ್ ಸರ್ಜರಿಯಾದ ನಂತರ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಕಳೆದೊಂದು ವಾರದಿಂದ ಅವರು ಕೋಮಾಗೆ ಜಾರಿದ್ದರು. ಇದಾದ ಬಳಿಕ ಅವರ ಆರೋಗ್ಯದಲ್ಲಿ ಯಾವುದೇ ರೀತಿಯ ಚೇತರಿಕೆ ಕಂಡು ಬಂದಿರಲಿಲ್ಲ.
ಆಗಸ್ಟ್ 10ರಂದು ಪ್ರಣಬ್ ಮುಖರ್ಜಿ ಅವರು ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಾಗಿದ್ದು, ಮೆದುಳಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಆ ಬಳಿಕ ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಿದರೂ ಯಾವುದೇ ರೀತಿ ಚೇತರಿಕೆ ಕಂಡು ಬಂದಿರಲಿಲ್ಲ. ಹೀಗಾಗಿ ಅವರನ್ನು ಕೊರೊನಾ ವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಿಗೆ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿತ್ತು.
ಪ್ರಣಬ್ ಮುಖರ್ಜಿ ಅವರು ಜುಲೈ 25, 2012 ರಿಂದ ಜುಲೈ 12, 2017ರ ವರೆಗೆ ರಾಷ್ಟ್ರಪತಿಯಾಗಿದ್ದರು. ಪ್ರಣಬ್ ಅವರಿಗೆ 2008ರಲ್ಲಿ ಪದ್ಮ ವಿಭೂಷಣ ಹಾಗೂ 2019ರಲ್ಲಿ ಭಾರತ ರತ್ನ ನೀಡಿ ಗೌರವಿಸಲಾಗಿತ್ತು.
ಡಿಸೆಂಬರ್ 11, 1935ರಲ್ಲಿ ಜನಿಸಿದ್ದ ಪ್ರಣಬ್ ಮುಖರ್ಜಿ ಮಕ್ಕಳಾದ ಶರ್ಮಿಷ್ಠ ಮುಖರ್ಜಿ, ಅಭಿಜಿತ್ ಮುಖರ್ಜಿ, ಇಂದ್ರಜಿತ್ ಮುಖರ್ಜಿ ಅವರನ್ನು ಅಗಲಿದ್ದಾರೆ.
0 comments:
Post a Comment