ಕೊಚ್ಚಿ (ಕರಾವಳಿ ಟೈಮ್ಸ್) : ದುಬೈಯಿಂದ ಶುಕ್ರವಾರ ಸಂಜೆ ಕೋಯಿಕ್ಕೋಡ್ ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಿಂದ ಜಾರಿದ ಪರಿಣಾಮ ಅಪಘಾತ ಸಂಭವಿಸಿದೆ.
ಶುಕ್ರವಾರ ಸಂಜೆ 7:45 ಕ್ಕೆ ಈ ಅವಘಡ ನಡೆದಿದ್ದು, 174 ಪ್ರಯಾಣಿಕರು, 10 ಮಕ್ಕಳು, 5 ಮಂದಿ ವಿಮಾನ ಸಿಬ್ಬಂದಿಗಳು, ಇಬ್ಬರು ಪೈಲಟ್ ಗಳನ್ನು ಒಳಗೊಂಡಿದ್ದ ವಿಮಾನ ರನ್ ವೇಯಿಂದ ಕಣಿವೆಗೆ ಜಾರಿದ ಪರಿಣಾಮ ಇಬ್ಭಾಗವಾಗಿದೆ. ಘಟನೆಯಿಂದ ಸಾವು-ನೋವು ಸಂಭವಿಸಿರುವ ಸಾಧ್ಯತೆ ಇದ್ದು, ಸ್ಪಷ್ಟ ಮಾಹಿತಿ ಗೊತ್ತಾಗಿಲ್ಲ. ವರದಿಯ ಪ್ರಕಾರ ಓರ್ವ ಪೈಲಟ್ ಸೇರಿದಂತೆ ಒಟ್ಟು ಮೂವರು ಸಾವನ್ನಪ್ಪಿದ್ದಾರೆ. 40 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದು ರಕ್ಷಣಾ ಕಾರ್ಯ ಚುರುಕುಪಡೆದುಕೊಂಡಿದೆ ಎಂದು ಹೇಳಲಾಗಿದೆ.
ಮಂಗಳೂರಿನಲ್ಲಿ ನಡೆದಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಪತನದ ಮಾದರಿಯಲ್ಲಿ ಈ ಘಟನೆ ನಡೆದಿದೆ. ನಾಗರಿಕ ವಿಮಾನಯಾನದ ಪ್ರಧಾನ ನಿರ್ದೇಶನಾಲಯ ಈ ಘಟನೆ ಸಂಬಂಧ ತನಿಖೆಗೆ ಆದೇಶಸಿದೆ.
2019ರಲ್ಲೇ ಈ ರನ್ ವೇಯಲ್ಲಿರುವ ಸಮಸ್ಯೆಯ ಬಗ್ಗೆ ಡಿಜಿಸಿಎ ಎಚ್ಚರಿಕೆ ನೀಡಿತ್ತು ಎನ್ನಲಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆಯಲು ಕೇರಳ ಸರ್ಕಾರ 04832719493 ಸಹಾಯವಾಣಿಯನ್ನು ಪ್ರಾರಂಭಿಸಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದು, ಕೇರಳದ ವಿಮಾನ ದುರಂತದಲ್ಲಿ ಉಂಟಾಗಿರುವ ಸಾವು-ನೋವುಗಳಿಂದ ದುಃಖವಾಗಿದೆ ಎಂದು ಹೇಳಿದ್ದಾರೆ.
0 comments:
Post a Comment