ಸೆ. 7ರಿಂದ ರಾಜ್ಯದಲ್ಲಿ ಮೆಟ್ರೋ ಸಂಚಾರ ಪುನಾರಂಭ
ಸಿನಿಮಾ ಥಿಯೇಟರ್, ಸ್ವಿಮ್ಮಿಂಗ್ ಫೂಲ್, ಪಾರ್ಕ್, ಮಲ್ಟಿಫ್ಲೆಕ್ಸ್ ತೆರೆಯಲು ರಾಜ್ಯ ಸರಕಾರ ಅನುಮತಿ ನೀಡಿಲ್ಲ.
ಸೆ. 30 ರವರೆಗೂ ಇದೆಲ್ಲಾ ಬಂದ್ ಆಗಲಿದೆ
ಬೆಂಗಳೂರು (ಕರಾವಳಿ ಟೈಮ್ಸ್) : ಕೇಂದ್ರ ಗೃಹ ಸಚಿವಾಲಯ ಅನ್‌ಲಾಕ್ 4ರ ಮಾರ್ಗಸೂಚಿ ಪ್ರಕಟಿಸಿದ ಬೆನ್ನಲ್ಲೇ ಇದೀಗ ರಾಜ್ಯ ಸರಕಾರ ಕೂಡ ಅನ್‌ಲಾಕ್-4ರ ಮಾರ್ಗಸೂಚಿಯನ್ನು ಸೋಮವಾರ ಬಿಡುಗಡೆ ಮಾಡಿದೆ.
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಸೋಮವಾರ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಸೆಪ್ಟಂಬರ್ 7ರಿಂದ ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಶಾಲಾ-ಕಾಲೇಜು ಸೆ. 30ರವರೆಗೂ ತೆರೆಯುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಕಂಟೈನ್‌ಮೆಂಟ್ ವಲಯಗಳನ್ನು ಹೊರತುಪಡಿಸಿದ ಇತರೆ ಪ್ರದೇಶಗಳಲ್ಲಿ ಬಹುತೇಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಶಾಲಾ-ಕಾಲೇಜುಗಳು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಸೆಪ್ಟಂಬರ್ 30 ರವರೆಗೆ ತೆರೆಯುವಂತಿಲ್ಲ. ಆದರೆ ಆನ್‌ಲೈನ್, ದೂರಶಿಕ್ಷಣ ಕಲಿಕೆಗಳಿಗೆ ಅನುಮತಿ ಮುಂದುವರಿಯಲಿದೆ.
ಆನ್‌ಲೈನ್ ಬೋಧನೆ ಮತ್ತು ಟೆಲಿ ಸಮಾಲೋಚನೆ ಮತ್ತು ಈ ಸಂಬಂಧಿತ ಕಾರ್ಯಕ್ಕಾಗಿ ಒಮ್ಮೆಲೆ ಶಾಲೆಗಳಿಗೆ ಶೇಕಡಾ 50ರಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಕರೆಯಲು ಅನುಮತಿಸಬಹುದು.
9 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯುವುದಕ್ಕಾಗಿ ಕಂಟೈನ್‌ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಮಾತ್ರ ಸ್ವ ಇಚ್ಛೆಯ ಆಧಾರದ ಮೇಲೆ ತಮ್ಮ ಶಾಲೆಗಳಿಗೆ ಭೇಟಿ ನೀಡಲು ಅನುಮತಿಸಬಹುದು. ಆದರೆ ಇದು ವಿದ್ಯಾರ್ಥಿಗಳ ಹೆತ್ತವರ ಅಥವಾ ಪೋಷಕರ ಲಿಖಿತ ಅನುಮತಿಗೆ ಒಳಪಟ್ಟಿರಬೇಕು.. ಇದು ಸೆ.21 ರಿಂದ ಜಾರಿಗೆ ಬರುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಅದೇ ರೀತಿ ಸಿನಿಮಾ ಥಿಯೇಟರ್, ಸ್ವಿಮ್ಮಿಂಗ್ ಪೂಲ್ ತೆರೆಯಲು ರಾಜ್ಯ ಸರಕಾರದ ಮಾರ್ಗಸೂಚಿ ಅನುಮತಿ ನೀಡಿಲ್ಲ. ಮಲ್ಟಿಫ್ಲೆಕ್ಸ್, ಮನರಂಜನಾ ಪಾರ್ಕ್ ಗಳು ಕೂಡ ತೆರೆಯುವಂತಿಲ್ಲ. ಸೆಪ್ಟೆಂಬರ್ 30 ರವರೆಗೆ ಇದ್ಯಾವುದನ್ನೂ ತೆರೆಯದಂತೆ ಮಾರ್ಗಸೂಚಿಯಲ್ಲಿ ನಿರ್ಬಂಧ ಹೇರಲಾಗಿದೆ.
0 comments:
Post a Comment