ಬೆಂಗಳೂರು (ಕರಾವಳಿ ಟೈಮ್ಸ್) : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪುತ್ರಿ ಪದ್ಮಾವತಿ ಬಳಿಕ ಇದೀಗ ಸಿಎಂ ಕಾವೇರಿ ನಿವಾಸದಲ್ಲಿ ನಾಲ್ವರಿಗೆ ಹಾಗೂ ಗೃಹ ಕಚೇರಿ ಕೃಷ್ಣಾದಲ್ಲಿ 7 ಜನ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಾವೇರಿ, ಕೃಷ್ಣಾ ಸೇರಿ ಒಟ್ಟು 11 ಜನ ಸಿಬ್ಬಂದಿಗೆ ಸೋಂಕು ತಗುಲಿದೆ.
ಸಿಎಂ ಯಡಿಯೂರಪ್ಪನವರ ಕಾವೇರಿ ನಿವಾಸದಲ್ಲಿ ಅಡುಗೆ ಭಟ್ಟ ಹಾಗೂ ಮೂವರು ಮನೆ ಕೆಲಸದವರಿಗೆ ಸೋಂಕು ತಗುಲಿದೆ. ಅಲ್ಲದೆ ಸಿಎಂ ಗನ್ ಮ್ಯಾನ್, ವಿಶೇಷ ಕರ್ತವ್ಯಾಧಿಕಾರಿ ಕಾರು ಚಾಲಕ ಸೇರಿ ಗೃಹ ಕಚೇರಿ ಕೃಷ್ಣಾದಲ್ಲಿ ಒಟ್ಟು 7 ಜನರಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ. ಅಂಬುಲೆನ್ಸ್ ಮೂಲಕ ಸಿಬ್ಬಂದಿಯನ್ನು ಕೋವಿಡ್ ಕೇರ್ ಸೆಂಟರಿಗೆ ಕರೆದೊಯ್ಯಲಾಗುತ್ತಿದೆ.
ಸಿಎಂ ಗೃಹ ಕಛೇರಿ ಕಾವೇರಿ ಹಾಗೂ ಕೃಷ್ಣದಲ್ಲಿ ಒಟ್ಟು 11 ಜನರಿಗೆ ಪಾಸಿಟಿವ್ ಬಂದಿದ್ದು, 8 ಜನ ಸಿಬ್ಬಂದಿಯನ್ನು ಶಿಫ್ಟ್ ಮಾಡಲಾಗಿದೆ. ಉಳಿದ ಮೂವರನ್ನು ಶಿಫ್ಟ್ ಮಾಡಲು ಇನ್ನು 3 ಅಂಬುಲೆನ್ಸ್ ಗಳನ್ನು ಕಳಿಸಲಾಗುತ್ತದೆ. ಒಟ್ಟು 50 ಜನರಿಗೆ ರ‍್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದು ರೋಗ ಲಕ್ಷಣ ಇದ್ದರೆ ಮತ್ತೆ ಗಂಟಲು ದ್ರವ ಪರೀಕ್ಷೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯ ಮನೆ ಹಾಗೂ ಕಚೇರಿಗೆ ಸ್ಯಾನಿಟೈಸ್ ಮಾಡಲಾಗಿದೆ.
ಎಲ್ಲ ಸಿಬ್ಬಂದಿಯನ್ನು ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ಗೆ ಶಿಫ್ಟ್ ಮಾಡಲಾಗುತ್ತಿದೆ. ಎಲ್ಲರಿಗೂ ಅಲ್ಲೇ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಾನುವಾರ ರಾತ್ರಿಯಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರಿ ಪದ್ಮಾವತಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದೀಗ ಗೃಹ ಕಚೇರಿ ಕೃಷ್ಣಾ ಹಾಗೂ ಕಾವೇರಿ ನಿವಾಸದ ಸಿಬ್ಬಂದಿಗಳಲ್ಲಿಯೂ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
0 comments:
Post a Comment