ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಭೀತಿಯಿಂದ ಲಾಕ್‍ಡೌನ್ ಪರಿಸ್ಥಿಯಿಂದ ಸಂಕಷ್ಟದಲ್ಲಿರುವ ಅಕ್ಷರ ದಾಸೋಹ ನೌಕರರಿಗೆ ವೇತನ ನೀಡುವ ಬಗ್ಗೆ ಮತ್ತು ದಾಸೋಹ ನೌಕರರಿಗೆ ಲಾಕ್‍ಡೌನ್ ಅವಧಿಯ ಪ್ರತಿ ತಿಂಗಳು 6000/- ರೂಪಾಯಿ ನೀಡಬೇಕು, ವಿವಿಧ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕೆಂದು ಒತ್ತಾಯಿಸಿ ಬಿ ಸಿ ರೋಡು ಮಿನಿ ವಿಧಾನಸೌಧದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ, ದೇಶದ ಬೆಳವಣಿಗೆಯ ತಳಹದಿ ಶಿಕ್ಷಣ. ಇಂತಹ ಶಿಕ್ಷಣವನ್ನು ಪ್ರತಿಯೊಂದು ಮಗುವು ಪಡೆದುಕೊಳ್ಳಬೇಕು ಎಂಬುದು ನಮ್ಮ ಸಂವಿಧಾನದ ಆಶಯ. ಆದರೆ ಇಂದಿನ ಪ್ರಭುತ್ವದ ಧೋರಣೆ ಸರಕಾರದ ನೀತಿಗಳಿಂದ ಸಂವಿಧಾನಿಕ ಹಕ್ಕುಗಳು ಎಲ್ಲಾ ಮಕ್ಕಳಿಗೆ ಸಿಗುತ್ತಿಲ್ಲ. ಕೇವಲ ಉಳ್ಳವರಿಗೆ ಶಿಕ್ಷಣ ಎನ್ನುವ ರೀತಿಯಾಗಿದೆ. ಈ ಯೋಜನೆ 2001-02 ರಲ್ಲಿ ಪ್ರಾರಂಭವಾದಾಗ ಈ ಯೋಜನೆಯಡಿಯಲ್ಲಿ ಲಕ್ಷಾಂತರ ಮಹಿಳೆಯರಿಗೆ ಅಂದರೆ ದಲಿತ ವಿಧವಾ-ಸಂತ್ರಸ್ತ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವುದರ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಲು ಸಾಧ್ಯವಾಗಿದೆ. ಕೋವಿಡ್-19 ಲಾಕ್‍ಡೌನ್ ಪ್ರಾರಂಭವಾದ ಬಳಿಕ ಅವರಿಗೆ ಯಾವುದೇ ಪರಿಹಾರ ದೊರೆತಿಲ್ಲ. 2 ಲಕ್ಷ ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದ್ದರೂ ಅವರಿಗೆ ಈ ತನಕ ಯಾವುದೇ ನಯಾ ಪೈಸೆ ದೊರೆತಿಲ್ಲ. ಕೆಲಸವೂ ಇಲ್ಲ. ಪರಿಹಾರವೂ ಇಲ್ಲದೆ ಅವರು ಜೀವನ ನಿರ್ವಹಣಿಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಎಪ್ರಿಲ್ ನಂತರದ ವೇತನ ಹಾಗೂ ತಿಂಗಳಿಗೆ 6000/- ದಂತೆ ಕೋವಿಡ್ ಪರಿಹಾರವನ್ನು ಏಕಗಂಟಿನಲ್ಲಿ ನೀಡಬೇಕು ಎಂದು ಆಗ್ರಹಿಸಿದರು.
ಸರಕಾರ ಸರ್ವಾಧಿಕಾರ ಧೋರಣೆಯೊಂದಿಗೆ ಏಕಪಕ್ಷೀಯವಾಗಿ ಆಡಳಿತ ನಡೆಸುತ್ತಾ ಕಾಮಿಕರ ಕಾಯಿದೆ ಭೂ ಮಸೂದೆ ಕಾಯಿದೆಗಳನ್ನು ತಿದ್ದುಪಡಿ ಮಾಡುತ್ತಿದೆ. ಇದರ ವಿರುಧ್ದ ಕಾರ್ಮಿಕರು ಹೋರಾಟ ನಡೆಸುವುದಲ್ಲದೆ ಅಕ್ಷರ ದಾಸೋಹ ಸಿಬ್ಬಂದಿಗಳ ಹೋರಾಟಕ್ಕೆ ಸರಕಾರ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ನಡೆಸುವುದಾಗಿ ರಾಮಣ್ಣ ಎಚ್ಚರಿಸಿದರು.
ಅಕ್ಷರ ದಾಸೋಹ ನೌಕರರಿಗೆ ಎಪ್ರಿಲ್ ಮೇ ಜೂನ್ ಮತ್ತು ಜುಲೈ ತಿಂಗಳ ವೇತನ ನೀಡಬೇಕು. ಅದರ ಜೊತೆಯಲ್ಲಿ ಲಾಕ್‍ಡೌನ್ ಅವಧಿಯಲ್ಲಿ ಪ್ರತಿ ತಿಂಗಳು 6000/- ರೂಪಾಯಿ ನಗದು ನೀಡಬೇಕು, ಅಕ್ಷರ ದಾಸೋಹ ನೌಕರರ ಕೆಲಸ ಖಾಯಂ ಮಾಡಬೇಕು, ಅಕ್ಷರ ದಾಸೋಹ ಯೋಜನೆಗೆ ಕಡಿತ ಮಾಡಿದ ಅನುದಾನವನ್ನು ಕೇಂದ್ರ ಸರ್ಕಾರ ವಾಪಸ್ಸು ಮಾಡಬೇಕು, ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ವೇತನ 500/- ರೂಪಾಯಿ ನಿಗದಿಪಡಿಸಬೇಕು, ಮುಖ್ಯಮಂತ್ರಿಗಳು ಅಸಂಘಟಿತ ಕಾರ್ಮಿಕರಿಗೆ ಘೋಷಣೆ ಮಾಡಿರುವ ಆರ್ಥಿಕ ಪರಿಹಾರ ಅಕ್ಷರ ದಾಸೋಹ ನೌಕರರಿಗೆ ನೀಡಬೇಕು, ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆಗೆ ಅಕ್ಷರ ದಾಸೋಹ ನೌಕರರನ್ನು ಒಳಪಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಎಲ್.ಐ.ಸಿ ಮುಖಾಂತರ ಪಿಂಚಣಿ ನೀಡಲು ಒಪ್ಪಿಗೆ ನೀಡಬೇಕು, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಪೂರಕವಾಗಿ ಅಕ್ಷರ ದಾಸೋಹ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ಕೊಡುವುದನ್ನು ನಿಲ್ಲಿಸಬೇಕು, ಕೇಂದ್ರÀ್ರ ಸರಕಾರ ಈ ಕ್ರಮ ವಾಪಸ್ಸು ಪಡೆಯಬೇಕು, ಅನುದಾನದಲ್ಲಿ ಉಳಿದಿರುವ ಹಣದಲ್ಲಿ ಸಾಮಾಜಿಕ ಭದ್ರತೆಯ ಭಾಗವಾಗಿ ಪಿಂಚಣಿ ನೀಡಲು ಸರಕಾರ ಮುಂದಾಗಬೇಕು, ಅಕ್ಷರ ದಾಸೋಹ ನೌಕರರನ್ನು ‘ಡಿ’ ಗ್ರೂಪ್ ದರ್ಜೆಯ ನೌಕರರನ್ನಾಗಿ ಪರಿಗಣಿಸಬೇಕು ಮತ್ತು ನೇಮಕಾತಿ ಪತ್ರ ನೀಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಮಕ್ಕಳ ಹಾಜರಾತಿಯ ಆಧಾರದಲ್ಲಿ ಮತ್ತು ಸಣ್ಣ ಪುಟ್ಟ ತಪ್ಪುಗಳಿಗೆ ಕೆಲಸದಿಂದ ತೆಗೆದ ಬಿಸಿಯೂಟ ನೌಕರರನ್ನು ಕೆಲಸಕ್ಕೆ ಪುನಃ ನೇಮಿಸಬೇಕು ಮತ್ತು ಕೆಲಸದಿಂದ ತೆಗೆಯುವುದನ್ನು ನಿಲ್ಲಿಸಬೇಕು, ಅಕ್ಷರ ದಾಸೋಹ ನೌಕರರನ್ನು ಶಾಲಾ ಸಿಬ್ಬಂದಿಯೆಂದು ಪರಿಗಣಿಸಬೇಕು, ಉತ್ತಮ ಗುಣಮಟ್ಟದ ಹಾಗೂ ಸರಿಯಾದ ಪ್ರಮಾಣದ ಆಹಾರ ಧಾನ್ಯ ನಿಗದಿತ ಸಮಯದಲ್ಲಿ ವಿತರಿಸಬೇಕು, ಶಿಕ್ಷಕರಿಗೆ ನೀಡುವಂತೆ ಬೇಸಿಗೆ ರಜಾ ವೇತನವನ್ನು ಅಕ್ಷರ ದಾಸೋಹ ನೌಕರರಿಗೂ ನೀಡಬೇಕು, ಅಡುಗೆ ಮಾಡುವಾಗ ಸಂಭವಿಸುವ ಅಪಘಾತ ಮೊತ್ತವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಬೇಕು, ವೇತನ ನಿಗದಿತ ದಿನಾಂಕದಲ್ಲಿ ಪ್ರತಿ ತಿಂಗಳು ನೀಡಬೇಕು, ಯಾವುದೇ ಕಾರಣವಿಲ್ಲದೇ ಸ್ಥಳೀಯ ಹಿತಾಸಕ್ತಿಗಳಿಂದ ಕೆಲಸದಿಂದ ಕೈ ಬಿಡಬಾರದು ಸೇವಾ ನಿಯಮಾವಳಿ ಜಾರಿ ಮಾಡಬೇಕು, ಬಿಸಿಯೂಟ ಯೋಜನೆಯನ್ನು 12ನೇ ತರಗತಿವರೆಗೆ ವಿಸ್ತರಣೆ ಮಾಡಬೇಕು, ಪ್ರತಿ ಶಾಲೆಯಲ್ಲಿ ಕನಿಷ್ಟ 2 ಅಡುಗೆಯವರು ಇರಲೇಬೇಕು, ರಾಷ್ಟ್ರೀಯ ಸ್ವಾಸ್ಥ ಭೀಮ ಯೋಜನೆ ಜಾರಿ ಮಾಡಬೇಕು, ರಜಾ ದಿನಗಳಲ್ಲಿ (ಬೇಸಿಗೆ ಮತ್ತು ಇತರೆ ರಜೆ) ವೇತನ ನೀಡಬೇಕು, ಶಾಲೆಯಲ್ಲಿ ನಡೆಯುವ ಜಯಂತಿ ಆಚರಣೆ ಮತ್ತು ಯಾವುದೇ ಕಾರ್ಯಕ್ರಮಗಳಿಗೆ ಹೆಚ್ಚುವರಿ ವೇತನ ನೀಡಬೇಕು, ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಕೈತೋಟ ಮಾಡಲು ಅವಕಾಶವಿರುವುದರಿಂದ ಆ ಕೆಲಸವನ್ನು ಅಡುಗೆ ಸಿಬ್ಬಂದಿಯಿಂದಲೇ ಮಧ್ಯಾಹ್ನದ ನಂತರ ಮಾಡಿದರೆ ಉದ್ಯೋಗ ಖಾತ್ರಿಯಲ್ಲಿ ಕೊಡುವ 249 ರೂಪಾಯಿಗಳನ್ನು ಕನಿಷ್ಟ ಕೂಲಿ ಅಡುಗೆಯವರಿಗೆ ಕೊಡಲು ಸಾಧ್ಯವಾಗುತ್ತದೆ ಇವೇ ಮೊದಲಾದ ಬೇಡಿಕೆಗಳನ್ನು ಪ್ರತಿಭಟನಾಕಾರರನ್ನು ಸರಕಾರಕ್ಕೆ ಮುಂದಿಟ್ಟರು.
ಅಕ್ಷರ ದಾಸೋಹ ನೌಕಕರ ಸಂಘಟನೆಯ ತಾಲೂಕು ಅಧ್ಯಕ್ಷ ವಿನಯ ನಡುಮೊಗರು, ಸಿಐಟಿಯು ಮುಖಂಡರಾದ ಉದಯ ಕುಮಾರ್ ಬಂಟ್ವಾಳ, ಜನಾರ್ಧನ ಕುಲಾಲ್, ಡಿವೈಎಫ್‍ಐ ಮುಖಂಡರಾದ ಸುರೇಂದ್ರ ಕೋಟ್ಯಾನ್, ಲೋಲಾಕ್ಷಿ ಬಂಟ್ವಾಳ, ಲಿಯಾಕತ್ ಖಾನ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment