ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು-ಕಲಾಯಿ ಎಂಬಲ್ಲಿ ರಾಜ್ಯ ಅಲ್ಪಸಂಖ್ಯಾತ ಇಲಾಖೆಯಿಂದ ನಡೆಯಿತ್ತಿರುವ ಹಾಸ್ಟೆಲ್ ಕಾಮಗಾರಿ ಇದೀಗ ಸುರಿಯುತ್ತಿರುವ ಭಾರೀ ಮಳೆಗೆ ಕುಸಿಯುತ್ತಿದ್ದು, ಗಂಭೀರ ಅಪಾಯ ಎದುರಾಗಿದೆ. ಕಾಮಗಾರಿಯ ಪಿಲ್ಲರ್‍ಗಳು ಮಣ್ಣಿನಡಿ ಹುದುಗಿ ಹೋಗುತ್ತಿದೆ.
ಅಮ್ಮುಂಜೆ ಗ್ರಾಮದ ಸರ್ವೆ ನಂಬ್ರ 94/2ಪಿ2 ರಲ್ಲಿನ 1.04 ಎಕ್ರೆ ಜಮೀನು ಜಿ ಶಂಕರ ಶೆಟ್ಟಿ ಎಂಬವರಿಗೆ ಸೇರಿದ ಖಾಸಗಿ ವರ್ಗ ಜಮೀನಾಗಿದ್ದು, ಪಕ್ಕದಲ್ಲಿ ಮಂಗಳೂರು(ಬೈತುರ್ಲಿ)-ನೀರುಮಾರ್ಗ-ಕಲ್ಪನೆ ಜಿಲ್ಲಾ ಮುಖ್ಯ ರಸ್ತೆ ಇದೆ. ಇವರ ಖಾಸಗಿ ಜಮೀನು ಹಾಗೂ ರಸ್ತೆ ಮಾರ್ಜಿನ್ ಹೊರತುಪಡಿಸಿ ಇಲ್ಲಿನ ಬೇರೆ ಜಾಗ ಇರುವುದಿಲ್ಲ. ಆದರೂ ಶಂಕರ ಶೆಟ್ಟಿ ಅವರ ಗುಡ್ಡ ಜಮೀನನ್ನು ಅಗೆದು ಹಾಸ್ಟೆಲ್ ನಿರ್ಮಾಣಕ್ಕೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಈಗಾಗಲೇ ಶಂಕರ ಶೆಟ್ಟಿ ಅವರು ಕ್ಷೇತ್ರದ ಶಾಸಕರು ಹಾಗೂ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇವರ ದೂರಿನ ಆಧಾರದಲ್ಲಿ ಸ್ಥಳ ತನಿಖೆ ನಡೆಸಿದ ಇಲಾಖಾ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಕಟ್ಟಡ ನಿರ್ಮಾಣದ ಹಿಂದಿನ ಜಾಗ ಗುಡ್ಡವಾಗಿದ್ದು, ಸುಮಾರು 10 ಮೀಟರಿಗಿಂತ ಎತ್ತರದಲ್ಲಿರುವುದರಿಂದ ಕುಸಿತ ಸಾಧ್ಯತೆ ಇದೆ. ತಕ್ಷಣ ಕಾಮಗಾರಿ ನಿಲ್ಲಿಸುವಂತೆ ಮಾರ್ಚ್ 24 ರಂದು ಅಲ್ಪಸಂಖ್ಯಾತ ಇಲಾಖೆಗೆ ವರದಿ ಮಾಡಿ ಸೂಚಿಸಿದೆ. ಆದರೂ ಇಲಾಖೆ ಕಾಮಗಾರಿ ನಿಲ್ಲಿಸದೆ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಬಗ್ಗೆ ಇದೀಗ ಸ್ಥಳೀಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವೈಜ್ಞಾನಿಕ ಹಾಗೂ ಅಕ್ರಮ ಕಾಮಗಾರಿಯಿಂದಾಗಿ ಈಗಾಗಲೇ ಕೋಟ್ಯಂತರ ರೂಪಾಯಿ ಸರಕಾರಕ್ಕೆ ನಷ್ಟವಾಗುತ್ತಿದ್ದು, ಇದೀಗ ಭಾರೀ ಮಳೆಯಿಂದಾಗಿ ಕಟ್ಟಡ ನಿರ್ಮಾಣಕ್ಕೆ ಮೊದಲೇ ಅಪಾಯ, ಅವಾಂತರ ಸೃಷ್ಟಿಯಾಗುವ ಮೂಲಕ ಮತ್ತಷ್ಟು ನಷ್ಟ ಸಂಭವಿಸುವ ಬಗ್ಗೆ ಆತಂಕಪಡಲಾಗಿದೆ. ಇಲ್ಲಿನ ಅವೈಜ್ಞಾನಿಕ ಹಾಗೂ ಅಲ್ಪಸಂಖ್ಯಾತ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಪತ್ರಿಕೆ ಜುಲೈ 29 ರಂದು ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟವರನ್ನು ಎಚ್ಚರಿಸಿತ್ತು.
0 comments:
Post a Comment