ಮಂಗಳೂರು (ಕರಾವಳಿ ಟೈಮ್ಸ್) : ಸರಕಾರಿ ಆಸ್ಪತ್ರೆ ಬಲಪಡಿಸಿ, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಿ ಎಂದು ಆಗ್ರಹಿಸಿ ಹಾಗೂ ಕೊರೋನಾ ಹೆಸರಲ್ಲಿ ಆಸ್ಪತ್ರೆಗಳ ಲೂಟಿಕೋರ ನೀತಿಯನ್ನು ಖಂಡಿಸಿ, ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ವಿರೋಧಿಸಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬಲಪಡಿಸುವಂತೆ ಒತ್ತಾಯಿಸಿ, ಎಲ್ಲರಿಗೂ ಸಮಾನ ಗುಣಮಟ್ಟದ ಉಚಿತ ಚಿಕಿತ್ಸೆಗಾಗಿ ಒತ್ತಾಯಿಸಿ ಬೆಂಗರೆ ಪ್ರದೇಶದ ನಗರ ಆರೋಗ್ಯ ಕೇಂದ್ರದ ಎದುರು ಡಿವೈಎಫ್‍ಐ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಕೊರೊನಾ ರೋಗದ ವಿರುದ್ದ ಸರಕಾರಗಳು ಕೈಗೊಂಡ ಪರಿಹಾರ ಕ್ರಮಗಳೆಲ್ಲಾ ವಿಫಲಗೊಂಡಿದೆ. ಕೊರೊನಾ ಕಾಲಘಟ್ಟವನ್ನು ಬಳಸಿಕೊಂಡು ನಮ್ಮನ್ನಾಳುವ ಕೇಂದ್ರ ಸರಕಾರ ಇದ್ದ ನೀತಿಗಳನ್ನು ತಿದ್ದುಪಡಿ ಮಾಡಿದಲ್ಲದೆ ಸಾರ್ವಜನಿಕ ರಂಗದ ಉದ್ದಿಮೆಗಳನ್ನೆಲ್ಲಾ ಶ್ರೀಮಂತ ಧಣಿಗಳಿಗೆ ಸಂಪೂರ್ಣ ಮಾರಲು ಹೊರಟಿದೆ. ರಾಜ್ಯ ಸರಕಾರ ಕೊರೊನಾ ಹೆಸರಲ್ಲಿ ಮಾಸ್ಕ್, ವೆಂಟಿಲೇಟರ್ ಇನ್ನಿತರ ಸಾಮಾಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದೆ ಮತ್ತು ಖಾಸಗೀ ಆಸ್ಪತ್ರೆಗಳಿಗೆ ದುಬಾರಿ ದರ ವಸೂಲಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ ಇತ್ತ ಸ್ಥಳೀಯ ನಗರ ಪಾಲಿಕೆ ಆಡಳಿತ ಈ ಸಂದರ್ಭದಲ್ಲಿ ಕಳೆದ ಎರಡು ತಿಂಗಳುಗಳಿಂದ ಕುಡಿಯುವ ನೀರನ್ನು ಶುದ್ದೀಕರಿಸದೆ ಅದರಲ್ಲಿರುವ ವಿಷಕಾರಿ ಬ್ಯಾಕ್ಟೀರಿಯಾಗಳನ್ನು ನಾಶಪಡಿಸದೆ ವಿತರಿಸಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡಿದೆ. ಬಿಜೆಪಿ ಸರಕಾರದ ಈ ಆಡಳಿತ ನೀತಿಯು ಕೊರೊನಾಕ್ಕಿಂತಲೂ ಅಪಾಯಕಾರಿಯಲ್ಲದೆ ಮತ್ತಿನ್ನೇನು ಎಂದು ಪ್ರಶ್ನಿಸಿದರು.
ಡಿವೈಎಫ್‍ಐ ಜಿಲ್ಲಾದ್ಯಕ್ಷ ಬಿ ಕೆ ಇಮ್ತಿಯಾಜ್, ಡಿವೈಎಫ್‍ಐ ಜಿಲ್ಲಾ ಮುಖಂಡರಾದ ಸುನಿಲ್ ತೇವುಲ, ನೌಶಾದ್ ಬೆಂಗರೆ, ಹನೀಫ್ ಬೆಂಗರೆ, ರಿಝ್ವಾನ್, ಬಿಲಾಲ್, ನಾಸಿರ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment