ಬೆಳ್ತಂಗಡಿ (ಕರಾವಳಿ ಟೈಮ್ಸ್) : ಮದ್ಯಪಾನಿಯಾಗಿ ಮನೆಯಲ್ಲಿ ನಿರಂತರ ಗಲಾಟೆ ಮಾಡುತ್ತಿದ್ದ ಮಗನಿಗೆ ಬುದ್ಧಿವಾದ ಹೇಳಿದ ಕಾರಣಕ್ಕೆ ಕುಡುಕ ಮಗ ತಂದೆಯನ್ನೇ ತಲವಾರಿನಲ್ಲಿ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ಬೆಳ್ತಂಗಡಿ ಜ್ಯೂನಿಯರ್ ಕಾಲೇಜು ಬಳಿ ಸೋಮವಾರ ಮುಂಜಾನೆ ನಡೆದಿದೆ.
ಸ್ಥಳೀಯ ನಿವಾಸಿ ವಾಸು ಮೂಲ್ಯ (65) ಎಂಬವರೇ ಕೊಲೆಗೀಡಾದ ತಂದೆ. ಆರೋಪಿ ಮಗನನ್ನು ದಯಾನಂದ ಮೂಲ್ಯ (33) ಎಂದು ಹೆಸರಿಸಲಾಗಿದೆ. ವೃತ್ತಿಯನ್ನು ಕಾರು ಚಾಲಕರಾಗಿದ್ದ ವಾಸು ಮೂಲ್ಯ ಅವರು ಕುಡಿತದ ಚಟ ಹೊಂದಿ ನಿತ್ಯವೂ ಮನೆಯಲ್ಲಿ ಗಲಾಟೆ ಮಾಡಿಕೊಂಡಿದ್ದ ಮಗ ದಯಾನಂದನಿಗೆ ಬುದ್ದಿವಾದ ಹೇಳುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ತಂದೆಯೊಂದಿಗೆ ದ್ವೇಷ ಕಟ್ಟಿಕೊಂಡ ಮಗ ದಯಾನಂದ ಸೋಮವಾರ ಮುಂಜಾನೆ ತಂದೆ ವಾಸು ಮೂಲ್ಯ ವಾಕಿಂಗ್ ತೆರಳಿದ್ದ ವೇಳೆ ಹೊಂಚು ಹಾಕಿ ತಲವಾರು ಬಳಸಿ ಕಡಿದು ಹಾಕಿದ್ದಾನೆ. ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಾಸು ಮೂಲ್ಯ ಅವರನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಪಿಎಸ್ಸೈ ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಆರೋಪಿಯ ಪತ್ತೆಗೆ ಪೆÇಲೀಸರು ಬಲೆ ಬೀಸಿದ್ದಾರೆ.
0 comments:
Post a Comment