ಮಧ್ಯಾಹ್ನದ ವೇಳೆಗೆ ನೆರೆ ಕೊಂಚ ಇಳಿಮುಖ
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಶುಕ್ರವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ರಾತೋ ರಾತ್ರಿಯೇ ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬಂತು. ಮಧ್ಯಾಹ್ನದ ವೇಳೆಗೆ ನದಿ ನೀರಿನ ಮಟ್ಟ 9.3 ಮೀ ವರೆಗು ಏರಿ ಅಪಾಯದ ಮಟ್ಟ ಮೀರಿ ಹರಿದಿತ್ತು. ಮಳೆ ಮುಂದುವರಿದರೂ ಮಧ್ಯಾಹ್ನದ ಬಳಿಕ ನೆರೆ ನೀರಿನ ಪ್ರಮಾಣದಲ್ಲಿ ಕೊಂಚ ಇಳಿಮುಖವಾಗಿತ್ತು.
ತಾಲೂಕಿನ ನದಿ ಪಾತ್ರದ ಪ್ರದೇಶಗಳಾದ ಪಾಣೆಮಂಗಳೂರು, ಆಲಡ್ಕ, ನಂದಾವರ, ಬೋಗೋಡಿ, ಗೂಡಿನಬಳಿ, ಬಸ್ತಿಪಡ್ಪು, ಬಂಟ್ವಾಳ ಕೆಳಗಿನಪೇಟೆ, ತಲಪಾಡಿ, ಪೊನ್ನೋಡಿ, ತುಂಬೆ, ವಳವೂರು, ಪುದು ಗ್ರಾಮದ ಕೆಲ ಪ್ರದೇಶಗಳಿಗೂ ನೆರೆ ನೀರು ನುಗ್ಗಿದ್ದು, ಹಲವು ಮನೆ, ಅಂಗಡಿಗಳು ನೀರಿನಿಂದ ಆವೃತವಾಗಿದೆ. ಆಲಡ್ಕ ಕಿರು, ನಂದಾವರ, ಗೂಡಿನಬಳಿ ಕಂಚಿಕಾರ ಪೇಟೆ ಕಿರು ಸೇತುವೆಗಳು ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿತ್ತು. ಬಂಟ್ವಾಳ ಬಸ್ತಿಪಡ್ಪು ಜನಾರ್ದನ ಪೂಜಾರಿ ಮನೆ ಬಳಿಯೂ ರಸ್ತೆಗೆ ನೆರೆ ನೀರು ಆವರಿಸಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ತಾಲೂಕಿನ ಪಾಣೆಮಂಗಳೂರು ನೆರೆಪೀಡಿತ ಪ್ರದೇಶಗಳಿಗೆ ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಮೊದಲಾದರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
0 comments:
Post a Comment