ಬಂಟ್ವಾಳ ನಗರ ಪೊಲೀಸರ ಕಾರ್ಯಾಚರಣೆಯಿಂದ ಆರೋಪಿ ಅಂದರ್
ಬಂಟ್ವಾಳ (ಕರಾವಳಿ ಟೈಮ್ಸ್) : ಕಳ್ಳತನ ಪ್ರಕರಣದಲ್ಲಿ ಜೈಲು ಪಾಲಾಗಿ ಕಳೆದ ಹದಿನೈದು ದಿನಗಳ ಹಿಂದೆಯಷ್ಟೆ ಜೈಲಿನಿಂದ ಬಂದು ಮತ್ತೆ ಕಳ್ಳತನ ನಡೆಸಿದ ಅರೋಪಿ ತಾಲೂಕಿನ ಬಿ ಮೂಡ ಗ್ರಾಮದ ಪಲ್ಲಮಜಲು ನಿವಾಸಿ ಇಕ್ಕ ಯಾನೆ ಮಹಮ್ಮದ್ ಇಕ್ಬಾಲ್ (51) ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಅರೋಪಿಯಿಂದ 1,100/- ರೂಪಾಯಿ ನಗದು, ಟಾರ್ಜ್, ಸ್ಕ್ರೂಡ್ರೈವರ್, ಕಬ್ಬಿಣದ ರಾಡ್, ಬ್ಲೇಡ್, ಮೀನಿಗೆ ಹಾಕುವ ಗಾಳ, ನೈಲಾನ್ ಹಗ್ಗ ಹೊಂದಿದ್ದ ಚೀಲವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆ 7 ರಂದು ಮೊಂಡಕಾಪು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ಸಂಘದ ಕಾರ್ಯದರ್ಶಿ ರಾಜೀವಿ ಮಲ್ಲಿ ನೀಡಿದ ದೂರಿನ ಮೇರೆಗೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಶನಿವಾರ ಸಂಜೆ ಬಂಟ್ವಾಳ ನಗರ ಠಾಣಾ ಪೊಲೀಸರು ಗಸ್ತಿನಲ್ಲಿದ್ದ ವೇಳೆ ಅಮ್ಟಾಡಿ ಗ್ರಾಮದ ಗೋರೆಮಾರ್ ಬಳಿ ಆರೋಪಿ ಇಕ್ಬಾಲ್ ಬ್ಯಾಗ್ ಹಿಡಿದು ತಿರುಗುತ್ತಿದ್ದ. ಪೊಲೀಸ್ ವಾಹನ ನೋಡಿದ ಈತ ಸಂಶಯಾಸ್ಪದವಾಗಿ ತಪ್ಪಿಸುವ ಯತ್ನ ನಡೆಸಿದ್ದಾನೆ. ಇದರಿಂದ ಅನುಮಾನಗೊಂಡ ಪೊಲೀಸರು ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, 15 ದಿನದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದಿದ್ದು, ಊರಿನಲ್ಲಿ ಯಾವುದೇ ಕೆಲಸವಿಲ್ಲದ ಕಾರಣ ಮತ್ತೆ ಕಳವು ಮಾಡಿಕೊಂಡು ಮೀನು ಹಿಡಿಯಲು ಹೊರಟಿರುವುದಾಗಿ ತಿಳಿಸಿದ್ದಾನೆ. ಅಲ್ಲದೇ ಮೊಡಂಕಾಪು ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ನಗದು ಹಣವನ್ನು ಕಳವು ಮಾಡಿರುವ ಸಂಗತಿಯನ್ನು ಆರೋಪಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ.
ಬಂಧಿತನನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆತನಿಗೆ ಮತ್ತೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
0 comments:
Post a Comment