ಬಂಟ್ವಾಳ ನಗರ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿ ಪ್ರತ್ಯೇಕ ಪ್ರಕರಣ ದಾಖಲು
ಪೊಲೀಸರ ಕೂಲಂಕುಷ ತನಿಖೆಯಿಂದಷ್ಟೆ ಸತ್ಯಾಸತ್ಯತೆ ಗೊತ್ತಾಗಬೇಕಷ್ಟೆ
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ಆಲಾಡಿ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ಬೈಕುಗಳ ಮಧ್ಯೆ ಅಪಘಾತ ನಡೆದು ಸವಾರರು ಪರಸ್ಪರ ಹಲ್ಲೆ-ಪ್ರತಿ ಹಲ್ಲೆ ನಡೆಸಿಕೊಂಡಿದ್ದು, ಇಡೀ ಪ್ರಕರಣ ಬಳಿಕ ಗೊಂದಲದ ಗೂಡಾಗಿ ಪರಿಣಮಿಸಿದ ಘಟನೆಗೆ ಸಾಕ್ಷಿಯಾಯಿತು.
ಶುಕ್ರವಾರ ಮಧ್ಯಾಹ್ನ ಸುಮಾರು 12.20 ರ ವೇಳೆಗೆ ಸಜಿಪ ಮುನ್ನೂರು ಗ್ರಾಮದ ಆಲಾಡಿ ನಿವಾಸಿ ಮಹಮ್ಮದ್ ಶರೀಫ (22) ತನ್ನ ಬೈಕಿನಲ್ಲಿ ಮನೆಯಿಂದ ಸವಾರಿ ಮಾಡಿಕೊಂಡು ಬರುತ್ತಾ ಆಲಾಡಿ ಮಸೀದಿ ರಸ್ತೆಯಲ್ಲಿ ಸಾಗುತ್ತಿದ್ದಾಗ ಎದುರಿನಿಂದ ಇನ್ನೊಂದು ಬೈಕಿನಲ್ಲಿ ಬಂದ ಇಬ್ಬರು ಶರೀಫ್ ನ ಬೈಕಿಗೆ ಡಿಕ್ಕಿ ಹೊಡೆಸಿದ್ದು, ಪರಿಣಾಮ ಶರೀಫ್ ಬೈಕ್ ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಡಿಕ್ಕಿ ಹೊಡೆದ ಬೈಕಿನ ಸಹ ಸವಾರ ಕೂಡಾ ಈ ಘಟನೆ ವೇಳೆ ನೆಲಕ್ಕೆ ಬಿದ್ದಿರುತ್ತಾನೆ. ಆ ಬಳಿಕ ಸವಾರ ಶರೀಫಿಗೆ ಹಲ್ಲೆ ನಡೆಸಿದ್ದು, ಸಹ ಸವಾರ ತಲವಾರಿನಿಂದ ಹಲ್ಲೆ ನಡೆಸಲು ಯತ್ನಿಸಿದಾಗ ಶರೀಫ್ ಮನೆ ಕಡೆ ಓಡಿ ಹೋಗಿ ಅಪಾಯದಿಂದ ತಪ್ಪಿಸಿರುತ್ತಾನೆ ಎಂದು ಶರೀಫ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ ಪ್ರಕಾರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾದರೆ, ಇದೇ ಘಟನೆಗೆ ಸಂಬಂಧಿಸಿ ಸದ್ರಿ ಮಹಮ್ಮದ್ ಶರೀಫನ ಬಗ್ಗೆ ಮಾಹಿತಿ ನೀಡಿರುದಾಗಿ ಆರೋಪಿಸಿ ಸಜಿಪ ಮುನ್ನೂರು ಗ್ರಾಮದ ನಿವಾಸಿ ನವೀನ ಎಂಬಾತನಿಗೆ ಮಹಮ್ಮದ್ ಶರೀಫ, ಅನ್ಸಾರ್ ಮತ್ತು ಇತರ 10 ಮಂದಿಯ ತಂಡ ಹಲ್ಲೆ ನಡೆಸಿದೆ ಎಂದು ನವೀನ್ ನೀಡಿರುವ ದೂರಿನಂತೆ ಇನ್ನೊಂದು ಪ್ರಕರಣ ದಾಖಲಾಗಿದೆ. ಎರಡೂ ಪ್ರಕರಣದ ಇಬ್ಬರು ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನೆ ನಡೆಯುತ್ತಲೇ ವಿವಿಧ ರೀತಿಯ ಗೊಂದಲದ ಸಂದೇಶಗಳು ರವಾನೆಯಾಗಿ ಪೊಲೀಸರನ್ನೇ ದಿಕ್ಕು ತಪ್ಪಿಸುವ ಸನ್ನಿವೇಶವೂ ನಿರ್ಮಾಣವಾಗಿತ್ತು. ಘಟನೆಯಲ್ಲಿ ಗಾಯಗೊಂಡ ಶರೀಫ್ ಎಂಬಾತ 2017 ರ ಜುಲೈ ತಿಂಗಳಲ್ಲಿ ಕೊಲೆಯಾದ ತಾಲೂಕಿನ ಆರೆಸ್ಸೆಸ್ ಪ್ರಮುಖ, ಸಜಿಪ ಸಮೀಪದ ನಿವಾಸಿ ಶರತ್ ಮಡಿವಾಳ ಅವರ ಕೊಲೆ ಆರೋಪಿಗಳ ಪೈಕಿ ಓರ್ವನಾಗಿದ್ದ. ಈ ಹಿನ್ನಲೆಯಲ್ಲಿ ಶರೀಫ್ ಕೊಲೆಗೆ ಸ್ಕೆಚ್ ಹಾಕಿದ ತಂಡ ಬೈಕ್ ಅಪಘಾತ ನಡೆಸಿ ಹತ್ಯೆ ನಡೆಸು ಪ್ರಯತ್ನಿಸಿದೆ. ಈ ಕೃತ್ಯಕ್ಕೆ ಸ್ಥಳೀಯ ನಿವಾಸಿ, ಘಟನೆಯ ಇನ್ನೋರ್ವ ಗಾಯಾಳು ನವೀನ್ ಎಂಬಾತ ಮಾಹಿತಿ ನೀಡಿದ್ದಾನೆ ಎಂದು ಸಂಘಟನೆಯೊಂದು ಅರೋಪಿಸಿ ಸಂದೇಶ ರವಾನಿಸಿದರೆ, ಇನ್ನೊಂದು ಸಂಘಟನೆ ಬೈಕ್ ಅಪಘಾತದಲ್ಲಿ ಉಂಟಾದ ಸಣ್ಣ ಪ್ರಮಾಣದ ಮಾತಿನ ಚಕಮಕಿ ಪ್ರಕರಣಕ್ಕೆ ಹತ್ಯೆಗೆ ಯತ್ನ ಎಂಬ ಬಣ್ಣ ಹಚ್ಚಿ ಸಂಘಟನೆಯೊಂದು ಸ್ವಾರ್ಥ ಲಾಭ ಗಿಟ್ಟಿಸಲು ಪ್ರಯತ್ನಿಸಿದೆ ಎಂದು ಸಂದೇಶ ರವಾನಿಸಿದೆ.
ಒಟ್ಟಿನಲ್ಲಿ ಎರಡು ಧರ್ಮಗಳಿಗೆ ಸೇರಿದ ಸಂಘಟನೆ ಕಾರ್ಯಕರ್ತರು ಹರಿಯಬಿಟ್ಟಿದ್ದಾರೆ ಎನ್ನಲಾದ ಸಂದೇಶಗಳಿಂದ ಪೊಲೀಸರು ಇಡೀ ಪ್ರಕರಣದ ಬಗ್ಗೆ ಗೊಂದಲಕ್ಕೀಡಾಗಿದ್ದು, ಪೊಲೀಸರ ಕೂಲಂಕುಷ ತನಿಖೆಯಿಂದಷ್ಟೆ ಪ್ರಕರಣದ ಸತ್ಯಾಸತ್ಯತೆ ಗೊತ್ತಾಗಲಿದೆ. ಅಲ್ಲದೆ ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದಲೂ ವಿಭಿನ್ನವಾಗಿ ಮಾಧ್ಯಮ ಬಳಕೆಯೂ ನಡೆದಿದೆ ಎನ್ನಲಾಗಿದೆ. ಸದ್ಯ ಇಬ್ಬರು ಗಾಯಾಳುಗಳ ಹೇಳಿಕೆ ಹಾಗೂ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ನೈಜತೆ ಬೇಧಿಸಲು ಕಾರ್ಯಪ್ರವೃತ್ತರಾಗಿದ್ದಾರೆ.
0 comments:
Post a Comment