ಬಂಟ್ವಾಳ (ಕರಾವಳಿ ಟೈಮ್ಸ್) : ಪಿ ಎಂ ಕೇರ್ ಫಂಡಿನಿಂದ ನೀಡಲಾದ ವೆಂಟಿಲೇಟರ್‍ಗಳಿಗೆ ನಾಲ್ಕು ಲಕ್ಷ ರೂಪಾಯಿಗಳಿದ್ದರೆ, ರಾಜ್ಯದ ಸರಕಾರ ಖರೀದಿಸಿದ ವೆಂಟಿಲೇಟರ್‍ಗಳಿಗೆ 18 ಲಕ್ಷ ರೂಪಾಯಿಗಳವರೆಗೂ ದುಬಾರಿ ವೆಚ್ಚಗಳನ್ನು ನೀಡಿ ಖರೀದಿಸಲಾಗಿದೆ. ಇದಕ್ಕೆ ಸರಕಾರ ನೀಡುವ ಉತ್ತರ ಉತ್ತಮ ಗುಣ ಮಟ್ಟದ ವೆಂಟಿಲೇಟರ್‍ಗಳನ್ನು ಖರೀದಿಸಲಾಗಿದೆ ಎಂಬುದಾಗಿ. ಹಾಗಾದರೆ ಪಿ ಎಂ ಕೇರ್ ಫಂಡಿನಿಂದ ನೀಡಲಾಗಿರುವ ವೆಂಟಿಲೇಟರ್‍ಗಳು ಕಳಪೆ ಗುಣಮಟ್ಟದ್ದಾಗಿದೆಯೇ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಪ್ರಶ್ನಿಸಿದರು.
ಸರಕಾರಗಳ ಜನವಿರೋಧಿ ನೀತಿಗಳಾದ ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ, ಕೊರೋನಾ ಭ್ರಷ್ಟಾಚಾರ, ನೆರೆ ಪರಿಸ್ಥಿತಿ ನಿರ್ವಹಣೆಯಲ್ಲಿ ವೈಫಲ್ಯದ ವಿರುದ್ದ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ಗುರುವಾರ ಬಿ ಸಿ ರೋಡಿನ ಮಿನಿ ವಿಧಾನಸೌಧ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಉಳುವವನೇ ಹೊಲದೊಡೆಯ ಎಂಬ ಭೂಸುಧಾರಣಾ ಕಾನೂನು ಜಾರಿಗೆ ತಂದು ಬಡವರನ್ನು ಭೂಮಾಲಕರನ್ನಾಗಿ ಮಾಡಿದ್ದು ಕಾಂಗ್ರೆಸ್ ಸರಕಾರದ ಜನಪರ ನೀತಿಗಳಾಗಿವೆ. ಆದರೆ ಬಿಜೆಪಿ ಸರಕಾರ ಇದೀಗ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಬಡವರನ್ನು ಶೋಷಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕೂಡಾ ರೈತರ ಉಪಯೋಗಕ್ಕೆ ಸ್ಥಾಪನೆಯಾದ ಯೋಜನೆಯಾಗಿದ್ದು, ಇದೀಗ ಬಿಜೆಪಿ ಸರಕಾರ ಎಪಿಎಂಸಿ ಕಾಯ್ದೆಗೂ ತಿದ್ದುಪಡಿ ತಂದು ಅದನ್ನು ದುರ್ಬಲಗೊಳಿಸುವ ಮೂಲಕ ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ ರಮಾನಾಥ ರೈ ಯಾವುದೇ ಚರ್ಚೆ ಮಾಡದೆ ಕಾಯ್ದೆಗಳ ತಿದ್ದುಪಡಿ ಸರಿಯಲ್ಲ ಎಂದರು. ಕಳೆದ ಬಾರಿಯ ನೆರೆ ಪರಿಹಾರ ಇನ್ನೂ ಸಮರ್ಪಕ ಆಗಿಲ್ಲ.
ಸಂತ್ರಸ್ತರಿಗೆ ಪರಿಹಾರ ನೀಡಲು ಸರಕಾರ ವಿಫಲವಾಗಿದೆ ಎಂದ ರಮಾನಾಥ ರೈ ಕೇಂದ್ರದ ಮಂತ್ರಿಯೊಬ್ಬರು ಬಿ ಎಸ್ ಎನ್ ಎಲ್ ನೌಕರರು ದೇಶದ್ರೋಹಿಗಳು ಎಂಬ ಬಾಲಿಶ ಹಾಗೂ ಬೇಜವಾಬ್ದಾರಿಯ ಹೇಳಿಕೆ ನೀಡುತ್ತಿದ್ದಾರೆ. ಆದರರೆ ಬಿ ಎಸ್ ಎನ್ ಎಲ್ ನೌಕರರು ದೇಶದ್ರೋಹಿಗಳಲ್ಲ, ಬದಲಾಗಿ ಅದನ್ನು ನಡೆಸುವ ಇಲಾಖೆಯ ಮುಖ್ಯಸ್ಥರು ದೇಶದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂಬಾನಿ ಮಾಲಕತ್ವದ ಜಿಯೋ ಕಂಪೆನಿಗೆ ಜೀವ ನೀಡುವ ಉದ್ದೇಶಕ್ಕಾಗಿ ಸರಕಾರಿ ಸ್ವಾಮ್ಯದ ಬಿ ಎಸ್ ಎನ್ ಎಲ್ ಸಂಸ್ಥೆಯನ್ನು ದುರ್ಬಲಗೊಳಿಸಲಾಗುತ್ತದೆ ಎಂದು ವಾಗ್ದಾಳಿ ನಡೆಸಿದ ಅವರು ಖಾಸಗಿ ಕಂಪೆನಿಗಳ ಹಿತ ಕಾಯಲು ಹೊರಟಿರುವ ಬಿಜೆಪಿ ಸರಕಾರಗಳು ಬಡ ಸಾರ್ವಜನಿಕರ ಬದುಕಿನ ಮೇಲೆ ಪ್ರಹಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಜಿ ಪಂ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ ಜೈನ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಸದಸ್ಯರುಗಳಾದ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಲುಕ್ಮಾನ್ ಬಿ ಸಿ ರೋಡು, ಶರೀಫ್ ಶಾಂತಿಅಂಗಡಿ, ಲೋಲಾಕ್ಷ ಶೆಟ್ಟಿ, ಗಂಗಾಧರ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ ಪದ್ಮನಾಭ ರೈ, ಪ್ರಮುಖರಾದ ಮುಹಮ್ಮದ್ ನಂದಾವರ, ಮಂಜುಳಾ ಕುಶಲ ಪೆರಾಜೆ, ಸಿದ್ದೀಕ್ ಸರವು, ಧನಲಕ್ಷ್ಮಿ ಬಂಗೇರಾ, ಐಡಾ ಸುರೇಶ್, ಫ್ಲೋಸಿ ಡಿ’ಸೋಜ, ಮಧುಸೂಧನ್ ಶೆಣೈ, ವೆಂಕಪ್ಪ ಪೂಜಾರಿ, ಡೆಂಝಿಲ್ ನೊರೊನ್ಹಾ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಳಿಕ ತಾಲೂಕು ತಹಶೀಲ್ದಾರ್ ಮೂಲಕ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
0 comments:
Post a Comment