ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ತುಂಬೆಯಲ್ಲಿ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಸುದ್ದಿ ಮಾಡಿರುವ ಹಿರಿಯ ಉದ್ಯಮಿ, ಪ್ರತಿಷ್ಠಿತ ಬಿ.ಎ. ಸಮೂಹ ಸಂಸ್ಥೆಗಳ ಸಂಸ್ಥಾಪಕ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ (89) ಅವರು ಅಲ್ಪಕಾಲಸ ಅನಾರೋಗ್ಯದಿಂದ ಭಾನುವಾರ ಪೂರ್ವಾಹ್ನ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮರದ ಉದ್ಯಮ ಸ್ಥಾಪಿಸುವ ಮೂಲಕ ವ್ಯವಹಾರ ರಂಗಕ್ಕೆ ಬಂದಿದ್ದ ಅಹ್ಮದ್ ಹಾಜಿ ಅವರು ಬಳಿಕ ತುಂಬೆಯಲ್ಲಿ ಟಿಂಬರ್ಸ್, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಿಯು ಕಾಲೇಜು, ಕೈಗಾರಿಕಾ ಸಂಸ್ಥೆ (ಐಟಿಐ) ಸ್ಥಾಪಿಸಿದರಲ್ಲದೆ ಶಿಪ್ಪಿಂಗ್ ಕಂಪೆನಿಯನ್ನೂ ಸ್ಥಾಪಿಸಿದ್ದರು. ಬಳಿಕ ತುಂಬೆಯಲ್ಲಿ ಬಿ.ಎ. ಆಸ್ಪತ್ರೆಯನ್ನೂ ಸ್ಥಾಪಿಸಿದ್ದರು. ಬಳಿಕ ಅದನ್ನು ಫಾದರ್ ಮುಲ್ಲರ್ಸ್ ಸಂಸ್ಥೆಗೆ ನೀಡಿದ್ದು, ಇದೀಗ ಅವರು ಅದನ್ನು ಮುಂದುವರಿಸುತ್ತಿದ್ದಾರೆ.
ಯಶಸ್ವಿ ಉದ್ಯಮಿಯಾಗಿ, ಶೈಕ್ಷಣಿಕ ರೂವಾರಿಯಾಗಿರುವ ಅಹ್ಮದ್ ಹಾಜಿ ಅವರು ಜಿಲ್ಲೆಯ ಹಲವು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸಂಘ-ಸಂಸ್ಥೆಗಳ ಸಕ್ರಿಯವಾಗಿ ಸೇವೆ ಸಲ್ಲಿಸಿರುತ್ತಾರೆ.
ಮಂಗಳೂರಿನ ಬಂದರ್ ಕಂದಕ್‍ನ ಬದ್ರಿಯಾ ಶಿಕ್ಷಣ ಸಂಸ್ಥೆ, ಕ್ರೆಸೆಂಟ್ ಶಿಕ್ಷಣ ಸಂಸ್ಥೆ, ನವಭಾರತ್ ರಾತ್ರಿ ಪ್ರೌಢಶಾಲೆ, ಕಸಬಾ ಬೆಂಗರೆಯ ಶಾಲಾಭಿವೃದ್ದಿ ಸಮಿತಿ, ಮಂಗಳೂರು- ಬಂಟ್ವಾಳ - ಪುತ್ತೂರು-ಬೆಳ್ತಂಗಡಿ ತಾಲೂಕು ಸೀರತ್ ಕಮಿಟಿ, ದ.ಕ. ಮತ್ತು ಉಡುಪಿ ಜಿಲ್ಲಾ ಸೆಂಟ್ರಲ್ ಮುಸ್ಲಿಂ ಕಮಿಟಿ, ಇಸ್ಲಾಮಿಕ್ ಟ್ರಸ್ಟ್ ಮಂಗಳೂರು, ತುಂಬೆ ಮುಹಿಯುದ್ದೀನ್ ಜುಮಾ ಮಸ್ಜಿದ್, ತುಂಬೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ, ಯೆನಪೆÇಯ ಮೆಡಿಕಲ್ ಕಾಲೇಜು ಮತ್ತು ಯೆನಪೆÇಯ ಡೆಂಟಲ್ ಕಾಲೇಜಿನ ಟ್ರಸ್ಟಿಯಾಗಿ, ಬೆಂಗಳೂರಿನ ಅಲ್ ಅಮೀನ್ ಎಜುಕೇಶನ್ ಸೊಸೈಟಿ, ಕನ್ನಡ ಜಾಗೃತ ಸಮಿತಿ, ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ಹಾಗೂ ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರಾಗಿ, ಮಣಿಪಾಲ್ ಇಂಡಸ್ಟ್ರೀಸ್‍ನ ನಿರ್ದೇಶಕರಾಗಿ, ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಪೆÇೀಷಕರಾಗಿ ಸೇವೆ ಸಲ್ಲಿಸಿದ್ದರು.
ಸಂತಾಪ
ಅಹ್ಮದ್ ಹಾಜಿ ಮುಹಿಯುದ್ದೀನ್ ತುಂಬೆ ಅವರ ನಿಧನಕ್ಕೆ ಮಾಜಿ ಸಚಿವರಾದ ಬಿ ರಮಾನಾಥ ರೈ, ಯು ಟಿ ಖಾದರ್, ಬಂಟ್ವಾಳ ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ ಎಚ್ ಖಾದರ್, ಅಖಿಲ ಭಾರತ ಬ್ಯಾರಿ ಪರಿಷತ್ ಪ್ರಧಾನ ಕಾರ್ಯದರ್ಶಿ ಹಾಜಿ ಕೆ ಎಸ್ ಅಬೂಬಕ್ಕರ್ ಪಲ್ಲಮಜಲು ಸಹಿತ ಮೊದಲಾದ ಗಣ್ಯರು ಸಂತಾಪ ಸೂಚಿಸಿದ್ದಾರೆ.
0 comments:
Post a Comment