ಬಂಟ್ವಾಳ (ಕರಾವಳಿ ಟೈಮ್ಸ್) : ಮರದ ದಿಮ್ಮಿಗಳನ್ನು ಹೇರಿಕೊಂಡು ತೆರಳುತ್ತಿದ್ದ ಲಾರಿ ಭಾರ ತಾಳಲಾರದೆ ಕಲ್ಲಡ್ಕ ಸಮೀಪದ ಬೋಳಂಗಡಿ ಚಡವಿನಲ್ಲಿ ಮಂಗಳವಾರ ಸಂಜೆ ಹೆದ್ದಾರಿಯಲ್ಲೇ ಮಗುಚಿ ಬಿದ್ದಿದೆ.
ದೇರಳಕಟ್ಟೆ ಕಣಚೂರು ಸಂಸ್ಥೆಗೆ ಸೇರಿದ ಲಾರಿ ಇದಾಗಿದ್ದು, ಮರದ ದಿಮ್ಮಿಗಳನ್ನು ಹೇರಿಕೊಂಡು ಕಡೂರು ಕಡೆ ಹೊರಟಿತ್ತು ಎನ್ನಲಾಗಿದೆ. ಬೋಳಂಗಡಿ ಚಡವು ಸಮೀಪಿಸುತ್ತಲೇ ಲಾರಿ ಅಧಿಕ ಭಾರದಿಂದ ಮುಂದೆ ಸಾಗಲು ಸಾಧ್ಯವಾಗದೆ ಚಡವಿನಲ್ಲೇ ನಿಂತಿದೆ. ಈ ಸಂದರ್ಭ ಲಾರಿಯಲ್ಲಿದ್ದ ಚಾಲಕ ಹಾಗೂ ನಿರ್ವಾಹಕ ಲಾರಿಯಿಂದ ಕೆಳಗಿಳಿದಿದ್ದರು. ಲಾರಿ ಸುಮಾರು ಅರ್ಧ ತಾಸು ಇತ್ತು. ಆದರೆ ಭಾರ ತಾಳಲಾರದೆ ಹೆದ್ದಾರಿ ಮಧ್ಯ ಭಾಗಕ್ಕೆ ಮಗುಚಿ ಬಿದ್ದಿದೆ. ಲಾರಿ ನಿಂತಿದ್ದ ಸಮಯ ಸ್ಥಳಕ್ಕೆ ಕ್ರೇನ್ ಕರೆಸಿ ಲಾರಿಯನ್ನು ನಿಲ್ಲಿಸುವ ಪ್ರಯತ್ನ ನಡೆಸಲಾಯಿತಾದರೂ ಅದು ಅಧಿಕ ಭಾರದಿಂದ ಸಫಲವಾಗಿಲ್ಲ. ಲಾರಿ ಮಗುಚಿ ಬೀಳುವ ಸಂದರ್ಭ ಸ್ಥಳದಲ್ಲಿದ್ದ ಸಾರ್ವಜನಿಕರು ಈ ದೃಶ್ಯಗಳನ್ನು ಮೊಬೈಲ್ ಮೂಲಕ ಸೆರೆ ಹಿಡಿದಿದ್ದು, ಇದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.
ಹೆದ್ದಾರಿಯಲ್ಲೇ ಲಾರಿ ಮಗುಚಿ ಬಿದ್ದಿದ್ದರಿಂದ ಕೆಲ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡಿತ್ತು. ಬಳಿಕ ಸ್ಥಳಕ್ಕಾಗಮಿಸಿದ ಬಂಟ್ವಾಳ ಸಂಚಾರಿ ಪೊಲೀಸರು ಹೆದ್ದಾರಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
0 comments:
Post a Comment