ಮ್ಯಾರಥಾನ್ ವಿಚಾರಣೆಯ ಬಳಿಕ ರಾತ್ರಿ ತೀರ್ಪು ಪ್ರಕಟಿಸಿದ ಹೈಕೋರ್ಟ್
ಬೆಂಗಳೂರು (ಕರಾವಳಿ ಟೈಮ್ಸ್) : ನಾಳೆ ನಿಗದಿಯಾದಂತೆ ಸಿಇಟಿ ಪರೀಕ್ಷೆ ನಡೆಯಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಿಸಿದ ಸಿಇಟಿ ಪರೀಕ್ಷೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಬುಧವಾರ ಸಂಜೆ ಮಹತ್ವದ ಆದೇಶ ಪ್ರಕಟಿಸಿದೆ.
ಕೊರೊನಾ ಸಮಯದಲ್ಲಿ ಸಿಇಟಿ ನಡೆಸುತ್ತಿರುವುದನ್ನು ಪ್ರಶ್ನಿಸಿ ವಕೀಲರಾದ ಎಸ್.ಪಿ. ಪ್ರದೀಪ್ ಕುಮಾರ್, ಅಬ್ದುಲ್ಲಾ ಖಾನ್, ಎನ್‌ಎಸ್‌ಯುಐ ವಿದ್ಯಾರ್ಥಿಗಳು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನ್ಯಾ. ಅರವಿಂದ ಕುಮಾರ್ ಮತ್ತು ನ್ಯಾ. ಎಂ.ಐ ಅರುಣ್ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು. ಮಧ್ಯಾಹ್ನ 2:30ಕ್ಕೆ ಆರಂಭಗೊಂಡ ವಿಚಾರಣೆ ಸಂಜೆ 5:30ರ ವರೆಗೆ ನಡೆಯಿತು. ಬಳಿಕ 15 ನಿಮಿಷ ಮುಂದೂಡಿ ಮತ್ತೆ ಆರಂಭವಾಗಿ ಮತ್ತೆ ಮುಂದೂಡಲಾಗಿತ್ತು. ಅಂತಿಮವಾಗಿ ರಾತ್ರಿ 7:30ಕ್ಕೆ ನ್ಯಾಯಾಲಯ ಆದೇಶ ನೀಡಿದೆ.
ಸಿಇಟಿಯನ್ನು ಮುಂದೂಡಿದರೆ ಏನು ನಷ್ಟವಾಗಲಿದೆ? ಮುಂದೂಡಿದರೆ ಸರಿಪಡಿಸಲಾಗದಷ್ಟು ತೊಂದರೆಯಾಗಲಿದೆಯೇ ಎಂದು ನ್ಯಾ. ಅರವಿಂದ್ ಕುಮಾರ್ ಸರ್ಕಾರವನ್ನು ಪ್ರಶ್ನೆ ಮಾಡಿದರು. ಮುಂದೂಡಿದರೆ ಈಗಾಗಲೇ ಸಿದ್ಧಗೊಂಡಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು ಎಂದು ಎಎಜಿ ಧ್ಯಾನ್ ಚಿನ್ನಪ್ಪ ಉತ್ತರಿಸಿದರು.
ಕಂಟೈನ್ಮೆಂಟ್ ಝೋನ್ ನಿಂದ ಬರುವವರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಎಲ್ಲಾ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಅವರ ಕೈಯಲ್ಲಿ ಇರುವ ಹಾಲ್ ಟಿಕೆಟ್ ಪಾಸ್ ಎಂದು ಪರಿಗಣಿಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಪೊನ್ನಣ್ಣ, ಪರೀಕ್ಷಾ ಪ್ರಾಧಿಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಇತ್ತು. ಈಗ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ. ಬೆಂಗಳೂರು ನಗರದಲ್ಲಿ 48 ಸಾವಿರ ಪ್ರಕರಣವಿದೆ. ನೂರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ವಾದಿಸಿದರು.
ಅರ್ಜಿದಾರರ ಪರ ವಕೀಲ ಅನಿಲ್ ಕುಮಾರ್ ವಾದ ಮಂಡಿಸಿ, 97 ಕೇಂದ್ರಗಳಲ್ಲಿ ಎರಡು ದಿನ ಪರೀಕ್ಷೆ ನಡೆಯಲಿದೆ. ಪಾಸಿಟಿವ್ ಇರುವವರು ಸ್ವಂತ ಅಂಬುಲೆನ್ಸ್‌ನಲ್ಲಿ 2 ಗಂಟೆ ಮೊದಲು ಬರಬೇಕು. ಜೊತೆ ಲಂಚ್ ಬಾಕ್ಸ್ ತರಬೇಕು ಎಂದು ಮಾರ್ಗಸೂಚಿ ಹೇಳಿದೆ. ಆದರೆ ಈಗ ಆಸ್ಪತ್ರೆಗೆ ತೆರಳಲು ಅಂಬುಲೆನ್ಸ್ ಇಲ್ಲದಿರುವಾಗ ವಿದ್ಯಾರ್ಥಿಗಳು ಹೇಗೆ ಬರಬೇಕು ಎಂದು ಪ್ರಶ್ನಿಸಿದರು.
ವಕೀಲ ಅಬ್ದುಲ್ ಮನನ್ ಖಾನ್, ಪರೀಕ್ಷೆಯಲ್ಲಿ ಬೆರಳಚ್ಚು ತೆಗೆದುಕೊಳ್ಳಲು ಇಂಕ್ ಪ್ಯಾಡ್ ಬಳಸುತ್ತಾರೆ. ಎಲ್ಲರೂ ಅದೇ ಇಂಕ್ ಪ್ಯಾಡ್ ಬಳಸಿದರೆ ಕೊರೊನಾ ಒಬ್ಬರಿಂದ ಒಬ್ಬರಿಗೆ ಹಬ್ಬುವ ಸಾಧ್ಯತೆಯಿದೆ. ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳೇ ಈಗ ಪರೀಕ್ಷೆ ಬೇಡ ಎಂದು ಆಂದೋಲನ ಮಾಡುತ್ತಿದ್ದಾರೆ. ಹೀಗಾಗಿ ಈ ಸಮಯದಲ್ಲಿ ಪರೀಕ್ಷೆ ಮಾಡುವುದು ಬೇಡ ಎಂದು ವಾದಿಸಿದರು.
ಸರ್ಕಾರ ಪರ ಎಎಜಿ ಧ್ಯಾನ್ ಚಿನ್ನಪ್ಪ, ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಹಾಲ್ ಟಿಕೆಟ್ ಡೌನ್ ಲೋಡ್ ಮಾಡಿದ್ದಾರೆ. ಅವರೆಲ್ಲ ನಾಳೆ ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು. ಪೊನ್ನಣ್ಣ ಅವರು ಪಕ್ಕದ ತೆಲಂಗಾಣದಲ್ಲಿ ಪರೀಕ್ಷೆಯನ್ನು ಮುಂದೂಡಿದ್ದಾರೆ ಎಂದಾಗ ಎಎಜಿ, ಎರಡು ವಾರದ ಹಿಂದೆ ಕೇರಳದಲ್ಲಿ ಎಂಜಿನಿಯರಿಂಗ್ ಪರೀಕ್ಷೆ ಮಾಡಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.
ಕಲಾಪದ ವೇಳೆ ಹೈಕೋರ್ಟ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಂತೆ ಸಿಇಟಿಯಲ್ಲೂ ವಂಚಿತರಾದವರಿಗೆ ಎರಡನೇ ಬಾರಿ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತಾ ಎಂದು ಪ್ರಶ್ನಿಸಿತು. ಇದಕ್ಕೆ ಎಎಜಿ 40 ಸೋಂಕಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಅವರಿಗೆ ಈಗಾಗಲೇ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್‌ನಲ್ಲೂ ಕೊರೊನಾ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇಲ್ಲ ಎಂದು ಉತ್ತರಿಸಿದರು.
ನ್ಯಾ. ಅರವಿಂದ ಕುಮಾರ್ ಮತ್ತೊಮ್ಮೆ ಪರೀಕ್ಷೆಯಿಂದ ವಂಚಿತರಾದವರ ಕಥೆ ಏನು? ಪರೀಕ್ಷೆಗೆ ಇನ್ನು ಕೆಲ ಗಂಟೆ ಇದೆ ಆದರೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಇಷ್ಟು ಆತುರದಿಂದ ಪರೀಕ್ಷೆಯನ್ನು ಯಾಕೆ ನಡೆಸಲಾಗುತ್ತದೆ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ನೀವು ಪರೀಕ್ಷೆ ದಿನ ನಿಗದಿ ಪಡಿಸಿದ್ದೀರಿ. ಪರೀಕ್ಷೆ ದಿನಾಂಕ ಪ್ರಕಟವಾಗುವಾಗ ಸಂಖ್ಯೆ ಬಹಳ ಕಡಿಮೆ ಇತ್ತು. ಈಗ ವಿದ್ಯಾರ್ಥಿಗಳನ್ನು ತೊಂದರೆಗೆ ಸಿಲುಕಿಸಲು ಸಾಧ್ಯವಾಗುತ್ತಾ ಎಂದು ಪ್ರಶ್ನಿಸಿ ಸರ್ಕಾರದ ಮಾರ್ಗಸೂಚಿಯ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
ನಾಳೆ ಪಾಸಿಟಿವ್ ಇರುವ ವಿದ್ಯಾರ್ಥಿ ಬಂದರೆ ಆತ ಎಲ್ಲಿ ಇರಬೇಕು? ವಿದ್ಯಾರ್ಥಿಯ ಉಷ್ಣಾಂಶ ಜಾಸ್ತಿ ಆದರೆ ಅವನ ಗತಿ ಏನು? ನಿಮ್ಮ ಎಸ್‌ಒಪಿ ಜುಲೈ 18 ರಂದು ಬಂದಿದೆ. ಅಂದಿಗೂ ಇಂದಿಗೂ ಬಹಳ ವ್ಯತ್ಯಾಸ ಇದೆ ಅಲ್ವಾ? ಈಗಾಗಲೇ ಮನೆಯವರಿಗೆ ಪಾಸಿಟಿವ್ ಇದ್ದು, ಆ ವಿದ್ಯಾರ್ಥಿಗಳು ಪರೀಕ್ಷೆಗೆ ಬಂದರೆ ಏನು ಕ್ರಮ ತೆಗೆದುಕೊಂಡಿದ್ದೀರಿ? ಕಂಟೈನ್ಮೆಂಟ್ ಝೋನ್ ಗಳು ಈಗ ಬದಲಾಗಿದೆ ಅಲ್ಲವೇ ಎಂದು ಜಡ್ಜ್ ಸರ್ಕಾರವನ್ನು ಪ್ರಶ್ನಿಸಿದರು.
ಈ ಪ್ರಶ್ನೆಗೆ ಎಎಜಿ, ನಿನ್ನೆ ಎಲ್ಲಾ ಜಿಲ್ಲಾಡಳಿತದ ಜೊತೆ ಸಭೆ ಮಾಡಲಾಗಿದೆ. ಎಲ್ಲರೂ ಪರೀಕ್ಷೆ ಗೆ ಸಿದ್ದರಾಗಿದ್ದಾರೆ. 8,100 ರೂಂಗಳ ವ್ಯವಸ್ಥೆ ಇದೆ. 1,94,000 ವಿದ್ಯಾರ್ಥಿಗಳು ಬರೆಯುತ್ತಾರೆ. ಯುಜಿಸಿ ಪರೀಕ್ಷೆಗಳು ಸೆಪ್ಟೆಂಬರ್ 30ಕ್ಕೆ ಮುಕ್ತಾಯ ಆಗುತ್ತದೆ. ಕೊರೋನಾ ಕಡಿಮೆ ಆಗುತ್ತಾ? ಜಾಸ್ತಿ ಆಗುತ್ತಾ ಎನ್ನುವುದು ನಮಗೂ ಗೊತ್ತಿಲ್ಲ ಎಂದು ಉತ್ತರಿಸಿದರು.
ಈಗಾಗಲೇ 37 ಸಾವಿರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರವನ್ನು ಬದಲಾಯಿಸಿದ್ದಾರೆ.
ಪಿಯುಸಿ ಇಂಗ್ಲಿಷ್, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಶಸ್ವಿಯಾಗಿದೆ. ಎಲ್ಲ ಕೇಂದ್ರಗಳಲ್ಲಿ ಒಂದು ಕೊಠಡಿಯನ್ನು ಮೀಸಲಿಡಲಾಗುತ್ತದೆ. ಉಷ್ಣಾಂಶದಲ್ಲಿ ವ್ಯತ್ಯಾಸ ಆದರೆ ಅಲ್ಲಿಗೆ ಶಿಫ್ಟ್ ಮಾಡಲಾಗುತ್ತದೆ ಎಂದು ಉತ್ತರಿಸಿದರು. ಎರಡು ಕಡೆಯ ವಾದವನ್ನು ಆಲಿಸಿದ ಕೋರ್ಟ್ ರಾತ್ರಿ 7:30ಕ್ಕೆ ತನ್ನ ಆದೇಶವನ್ನು ಪ್ರಕಟಿಸಿತು.
ರಾಜ್ಯದಲ್ಲಿ 2020ನೇ ಸಾಲಿನ ಸಿಇಟಿ ಪರೀಕ್ಷೆ ಜುಲೈ 30, 31 ಹಾಗೂ ಆಗಸ್ಟ್ 1ಕ್ಕೆ ನಿಗದಿ ಪಡಿಸಿ ಮೇ 13ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ. ಜುಲೈ 18ರಂದು ಪ್ರಾಧಿಕಾರ ಪರೀಕ್ಷಾ ಕೇಂದ್ರಗಳು ಯಾವ ರೀತಿ ತಯಾರಿ ನಡೆಸಬೇಕು ಎಂಬುದರ ಸಂಬಂಧವಾಗಿ ಮಾರ್ಗ ಸೂಚಿಯನ್ನು ಪ್ರಕಟಿಸಿದೆ.
ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ. ಹೀಗಾಗಿ ಸಿಇಟಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಪಿಯು ಅಂಕಗಳ ಆಧಾರದಲ್ಲಿ ವೃತ್ತಿ ಶಿಕ್ಷಣ ಕೋರ್ಸ್‍ಗಳಿಗೆ ಪ್ರವೇಶ ನೀಡಬೇಕೆಂದು ಅರ್ಜಿದಾರರು ಮನವಿ ಮಾಡಿಕೊಂಡಿದ್ದರು.
ರಾಜ್ಯದಲ್ಲಿ ಕೊರೊನಾ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ 2020ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಮುಂದೂಡಿ ನಂತರ ಪರೀಕ್ಞಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಜುಲೈ 30 ರಂದು ಜೀವಶಾಸ್ತ್ರ, ಗಣಿತ ಜುಲೈ 31 ರಂದು ಭೌತಶಾಸ್ತ್ರ, ರಸಾಯನ ಶಾಸ್ತ್ರ ಪರೀಕ್ಷೆ ನಡೆದರೆ ಆಗಸ್ಟ್ ಒಂದರಂದು ಬೆಂಗಳೂರು ಕೇಂದ್ರದಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಪ್ರತಿ ದಿನ ಬೆಳಗ್ಗೆ ಮತ್ತು ಮಧ್ಯಾಹ್ನ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕನ್ನಡ ಭಾಷಾ ಪರೀಕ್ಷೆಯನ್ನು 50 ಅಂಕಗಳಿಗೆ ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ನಡೆಸಲಾಗುತ್ತದೆ. ಇತರೆ ವಿಷಯಗಳ ಪರೀಕ್ಷೆಗಳನ್ನು 60 ಅಂಕಗಳಿಗೆ ನಡೆಸಲಾಗುತ್ತದೆ.
ಮೊದಲನೇ ವರ್ಷದ / ಮೊದಲನೇ ಸೆಮಿಸ್ಟರ್ ನ ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನದ ಕೋರ್ಸ್‌ಗಳು ಮತ್ತು ಬಿ-ಫಾರ್ಮಾ-ಡಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ.
0 comments:
Post a Comment