ವಿಟ್ಲ (ಕರಾವಳಿ ಟೈಮ್ಸ್) : ವಿಟ್ಲದ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಒತ್ತಾಯಿಸಿ ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ವತಿಯಿಂದ ಇಂದಿನಿಂದ ಹದಿನೈದು ದಿನಗಳ ಕಾಲ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ ನಡೆಸಲು ತೀರ್ಮಾನಿಸಿದ್ದು ಇದಕ್ಕೆ ಸಂಬಂಧಿಸಿ ಫೋಸ್ಟರ್ ರಚನೆ ಹಾಗೂ ಬರಹ ಹಾಗೂ ವಿಡಿಯೋ ಸಂದೇಶಗಳನ್ನು ಹಂಚಿಕೊಳ್ಳಲು ತೀರ್ಮಾನಿಸಲಾಗಿದೆ.
ಈ ಒಂದು ಜನಪರ ಅಭಿಯಾನಕ್ಕೆ ಡಿ.ವೈ.ಎಫ್.ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಭಾನುವಾರ ಚಾಲನೆ ನೀಡಿದರು.
ಸರಕಾರಿ ಆಸ್ಪತ್ರೆಗಳ ಮಹತ್ವ ಹಾಗೂ ಇಂದಿನ ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳು ಯಾವುದೇ ನಿಯಂತ್ರಣ ಇಲ್ಲದೆ ಜನರಲ್ಲಿ ವಿಪರೀತ ದರ ವಸೂಲಿ ಮಾಡುತ್ತಿದ್ದು ಈ ಕಾರಣದಿಂದಾಗಿ ಇಂದಿನ ಪರಿಸ್ಥಿತಿಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಎಲ್ಲಾ ಚಿಕಿತ್ಸೆಗಳು ದೊರಕುವಂತಾಗಬೇಕು. ವಿಟ್ಲವು ಹೆಚ್ಚಿನ ಜನ ವಸತಿ ಇರುವ ಪ್ರದೇಶವಾಗಿದ್ದು ಗ್ರಾಮ ಪಂಚಾಯತ್ ನಿಂದ ಮೇಲ್ದರ್ಜೆಗೊಂಡು ಕಳೆದ ಐದಾರು ವರ್ಷಗಳಿಂದ ಪಟ್ಟಣ ಪಂಚಾಯತ್ ಆಗಿರುತ್ತದೆ. ಅಲ್ಲದೇ ವಿಟ್ಲ ಸುತ್ತಮುತ್ತಲಿನ ಹಲವು ಗ್ರಾಮಗಳ ಜನರು ವಿಟ್ಲದ ಸಮುದಾಯ ಆಸ್ಪತ್ರೆಯನ್ನೇ ಅವಲಂಬಿಸಿರುತ್ತಾರೆ. ಆದರೆ ಈ ಸಮುದಾಯ ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯಗಳು ಇರುವುದಿಲ್ಲ. ತಜ್ಞ ವೈದ್ಯರ ನೇಮಕ ಹಾಗೂ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ವ್ಯವಸ್ಥೆ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿಯು ಸರಕಾರದ ಗಮನ ಸೆಳೆಯಲು ಸಾಮಾಜಿಕ ಜಾಲ ತಾಣಗಳ ಮೂಲಕ ವಿಟ್ಲ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವಂತೆ ಅಭಿಯಾನ ನಡೆಯಲಿದೆ ಎಂದು ಡಿ.ವೈ.ಎಪ್.ಐ ವಿಟ್ಲ ವಲಯ ಸಮಿತಿ ತಿಳಿಸಿದೆ.
0 comments:
Post a Comment