ಯೋಜನೆಯಡಿ ಈಗಾಗಲೇ 7.88 ಲಕ್ಷ ಅನಿವಾಸಿಗಳು ತಾಯ್ನಾಡು ತಲುಪಿದ್ದಾರೆ
ಈ ಬಾರಿ ಹೆಚ್ಚುವರಿ ವಿಮಾನಗಳ ವ್ಯವಸ್ಥೆಗೆ ಕ್ರಮ
ನವದೆಹಲಿ (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಹಾಗೂ ಲಾಕ್ ಡೌನ್ ಕಾರಣದಿಂದ ವಿದೇಶಗಳಲ್ಲಿ ಬಾಕಿಯಾಗಿರುವ ಅನಿವಾಸಿ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕೇಂದ್ರದ ಕಾರ್ಯಕ್ರಮ ವಂದೇ ಭಾರತ್ ಮಿಷನ್ ಇದರ 5ನೇ ಹಂತ ಆಗಸ್ಟ್ 1ರಿಂದ ಆರಂಭವಾಗಲಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ಈಗಾಗಲೇ 53 ವಿಮಾನಗಳಲ್ಲಿ ವಿದೇಶದಲ್ಲಿ ಬಾಕಿಯಾಗಿದ್ದ 2.5 ಲಕ್ಷಕ್ಕೂ ಅಧಿಕ ಭಾರತೀಯರನ್ನು ಕರೆತರಲಾಗಿದೆ ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಆಗಸ್ಟ್ 1ರಿಂದ ಐದನೇ ಹಂತ ಆರಂಭವಾಗಲಿದ್ದು, ಹೆಚ್ಚುವರಿ ವಿಮಾನ ಒದಗಿಸುವ ಬಗ್ಗೆ ಶೀಘ್ರದಲ್ಲಿಯೇ ಮಾಹಿತಿ ನೀಡಲಾಗುವುದು ಎಂದು ಏರ್ ಇಂಡಿಯಾ ಹೇಳಿದೆ.
ಈ ಹಂತದಲ್ಲಿ ಅಮೆರಿಕಾ, ಕೆನಡಾ, ಕತಾರ್, ಒಮಾನ್, ಯುಎಇ, ಆಸ್ಟ್ರೇಲಿಯಾ, ಜರ್ಮನಿ, ಥೈಲ್ಯಾಂಡ್, ಸಿಂಗಾಪುರ, ಇಂಗ್ಲೆಂಡ್, ಜರ್ಮನಿ, ಸೌದಿ ಅರಬೀಯಾ, ಬಹ್ರೇನ್, ನ್ಯೂಜಿಲೆಂಡ್, ಫಿಲಿಪೈನ್ಸ್ ಮೊದಲಾದ ರಾಷ್ಟ್ರಗಳಿಗೆ ವಿಮಾನಗಳನ್ನು ಕಳುಹಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
ಈ ಹಿಂದೆ ಮಾಡಿದ್ದಂತೆ ಈ ಹಂತದಲ್ಲಿ ಹೆಚ್ಚುವರಿ ವಿಮಾನಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ವಂದೆ ಭಾರತ್ ಮಿಷನ್ ಅಡಿಯಲ್ಲಿ ಜುಲೈ 22ರವರೆಗೂ ಕೊರೋನಾವೈರಸ್ ಕಾರಣದಿಂದ ವಿದೇಶದಲ್ಲಿ ಸಿಲುಕಿದ್ದ ಸುಮಾರು 7.88 ಲಕ್ಷ ಭಾರತೀಯರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಸುಮಾರು 1,03,976 ಭಾರತೀಯರು ನೇಪಾಳ, ಭೂತಾನ್, ಬಾಂಗ್ಲಾದೇಶದಿಂದ ಭೂ ಗಡಿಗಳ ಮೂಲಕ ಬಂದಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಕಳೆದ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ಮೇ 7ರಿಂದ ಸರ್ಕಾರ ವಂದೇ ಭಾರತ್ ಮಿಷನ್ ಆರಂಭಿಸಿದ್ದು, ನಾಲ್ಕನೇ ಹಂತ ಪ್ರಗತಿಯಲ್ಲಿದೆ.
0 comments:
Post a Comment