ಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಬೆದರಿಕೆ ಸಂದೇಶ ಬಂದ ಇಪ್ಪತ್ತ ನಾಲ್ಕು ತಾಸುಗಳಲ್ಲೇ ಅವರನ್ನು ಎತ್ತಂಗಡಿ ಮಾಡಿ ಸರಕಾರ ಆದೇಶ ಮಾಡಿರುವ ಬಗ್ಗೆ ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ. ಖಾದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನು ಕೈಗೆತ್ತಿಕೊಂಡರೆ, ನೈತಿಕ ಪೋಲಿಸ್ ಗಿರಿ ಮಾಡಿದ್ರೆ ಕ್ರಮ ಕೈಗೊಳ್ಳತ್ತೇನೆ ಎಂದು ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಎಚ್ಚರಿಕೆ ನೀಡಿದ ಡಿಸಿಗೆ ಸಾಮಾಜಿಕ ಜಾಲತಾಣದ ಗ್ರೂಪಿನಲ್ಲಿ ಕಿಡಿಗೇಡಿಯೊಬ್ಬ ಕೊಲೆ ಬೆದರಿಕೆ ಒಡ್ಡಿದ್ದ. ಸರಕಾರ ಕೊಲೆ ಬೆದರಿಕೆ ಹಾಕಿದವರಿಗೆ ಶಿಕ್ಷೆ ನೀಡುವ ಬದಲು ಜಿಲ್ಲಾಧಿಕಾರಿಗಳಿಗೆ ಶಿಕ್ಷೆ ನೀಡಿದೆ. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಧಿಕಾರಿಗಳಿಗೆ ಧೈರ್ಯ ತುಂಬುವ ಬದಲು ಬಿಜೆಪಿ ಮುಖಂಡರು ರಾಜಕೀಯ ಮೇಲಾಟ ಮಾಡುತ್ತಿದ್ದಾರೆ. ಮಾರಕ ಕೊರೊನಾ ಜನರನ್ನು ಉಸಿರುಗಟ್ಟಿಸುತ್ತಿದ್ದರೆ, ಬಿಜೆಪಿ ಜನಪ್ರತಿನಿಧಿಗಳು ಅಧಿಕಾರಿಗಳ ಉಸಿರುಗಟ್ಟಿಸುತ್ತಿದ್ದಾರೆ. ಉತ್ತರಿಸು ಸರ್ಕಾರ ನ್ಯಾಯ ಎಲ್ಲಿದೆ ಎಂದು ಯು.ಟಿ. ಖಾದರ್ ಟ್ವೀಟ್ ಮಾಡಿದ್ದಾರೆ.
ಅಕ್ರಮ ಜಾನುವಾರು ಸಾಗಾಟ ಹಾಗೂ ಜಾನುವಾರುಗಳನ್ನು ಸಾಗಾಟ ಮಾಡುವ ವಾಹನ ಹಾಗೂ ಜನರ ಮೇಲೆ ಹಲ್ಲೆ ನಡೆಸುವಂತಹ ಎರಡೂ ರೀತಿಯ ಕೃತ್ಯ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಸೋಮವಾರ ಮಂಗಳೂರಿನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ರಾಮ್ ಸೇನಾ ಅಭಿಮಾನಿ ಬಳಗ ಎಂಬ ವಾಟ್ಸಾಪ್ ಗ್ರೂಪಿನಲ್ಲಿ ವ್ಯಕ್ತಿಯೋರ್ವ “ಮೊದಲು ಇವಳನ್ನು ಕಡಿದು ಕೊಲ್ಲಬೇಕು” (ಫಸ್ಟ್ ಮೊಲೆನ್ ಕರ್ತ್ ಕೆರೋಡು) ಎಂದು ತುಳು ಭಾಷೆಯಲ್ಲಿ ಬೆದರಿಕೆಯ ಸಂದೇಶ ಹಾಕಿದ್ದಾನೆ. ಇದು ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
0 comments:
Post a Comment