ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗುವುದು : ಪೊಲೀಸ್ ಉಪ ಆಯುಕ್ತ
ಮಂಗಳೂರು (ಕರಾವಳಿ ಟೈಮ್ಸ್) : ಅಕ್ರಮ ಗೋಸಾಗಾಟಗಾರರನ್ನು ಹಿಡಿದು ಪೊಲೀಸರಿಗೊಪ್ಪಿಸಿ, ಪೊಲೀಸರೇ ಅವರ ವಿರುದ್ದ ಕ್ರಮ ಕೈಗೊಳ್ಳುತ್ತಾರೆ. ಆದರೆ ಗೋಸಾಗಾಟ ನೆಪದಲ್ಲಿ ಹಲ್ಲೆ-ಗೂಂಡಾಗಿರಿ ನಡೆಸಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರಿಗೆ ಸಾಮಾಜಿಕ ಜಾಲತಾಣ ವಾಟ್ಸಪ್ ಗ್ರೂಪ್ ಒಂದರಲ್ಲಿ ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣ ವರದಿಯಾಗಿದೆ.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಸಿಂಧೂ ಬಿ ರೂಪೇಶ್ ಆವರು ಅಕ್ರಮ ಗೋ ಸಾಗಾಟ ನಡೆಸುವವರನ್ನು ಪೊಲೀಸರಿಗೆ ಒಪ್ಪಿಸಬೇಕು, ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದ್ದರು. ಅಲ್ಲದೆ ಜಾನುವಾರು ಸಾಗಾಟ ಮಾಡುವ ವಾಹನದ ಹಾಗೂ ಜನರ ಮೇಲೆ ಹಲ್ಲೆ ನಡೆಸಿದರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಲಲಾಗುತ್ತದೆ ಎಂದು ಎಚ್ಚರಿಸಿದ್ದರು. ಡೀಸಿ ಅವರ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡಿದ್ದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.
ಈ ಮಾದ್ಯಮ ವರದಿಯ ಪೋಸ್ಟ್‍ಗೆ ಸಂಬಂಧಿಸಿ “ರಾಮ್ ಸೇನಾ” ಎಂಬ ವಾಟ್ಸಪ್ ಗುಂಪಿನಲ್ಲಿ +919632188546 ಮೊಬೈಲ್ ಸಂಖ್ಯೆಯಲ್ಲಿ ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿಗಳನ್ನು ಮೊದಲು ಕೊಲೆ ಮಾಡಬೇಕು ಎಂದು ತುಳುವಿನಲ್ಲಿ ಸಂದೇಶ ಪೊಸ್ಟ್ ಮಾಡಿದ್ದಾನೆ. ಈತನ ಈ ಸಂದೇಶ ಇದೀಗ ವೈರಲ್ ಆಗಿದೆ. ಈ ವಾಟ್ಸಪ್ ಗುಂಪಿನ ಸಂದೇಶ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಡೀಸಿಗೆ ಕೊಲೆ ಬೆದರಿಕೆ ಒಡ್ಡಿರುವ ವ್ಯಕ್ತಿಗಳು ಇನ್ಯಾರನ್ನು ಬಿಟ್ಟಾರು? ಇಂತಹ ವ್ಯಕ್ತಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಮಂಗಳೂರು ಉಪ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಅರುಣಾಂಶಗಿರಿ ಅವರು ಈಗಾಗಾಲೇ ಈ ಬಗ್ಗೆ ತನಿಖೆ ಪ್ರಾರಂಭವಾಗಿದೆ. ಜಿಲ್ಲಾಧಿಕಾರಿ ಜತೆ ಮಾತಾಡಿದ್ದೇವೆ. ಡೀಸಿ ದೂರು ನೀಡಿದರೆ ಸ್ವೀಕರಿಸಲಾಗುತ್ತದೆ. ಇಲ್ಲದೆ ಹೋದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಳ್ಳಲಾಗುತ್ತದೆ. ಯಾವ ಕಾರಣಕ್ಕೂ ಪ್ರಕರಣವನ್ನು ಕಡೆಗಣಿಸಲಾಗುವುದಿಲ್ಲ ಎಂದಿದ್ದಾರೆ.
0 comments:
Post a Comment