ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಪಡು ಗ್ರಾಮದ ತಲೆಮೊಗರು ಎಂಬಲ್ಲಿ ಕಳೆದ ಕೆಲ ತಿಂಗಳುಗಳಿಂದ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಬಗ್ಗೆ ಗ್ರಾಮಸ್ಥರು ಇತ್ತೀಚೆಗೆ ತಾಲೂಕು ತಹಶೀಲ್ದಾರ್ ಗೆ ಲಿಖಿತವಾಗಿ ದೂರಿಕೊಂಡಿದ್ದರು. ಈ ಹಿನ್ನಲೆಯಲ್ಲಿ ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರು ಕಳೆದ ಸೋಮವಾರ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಗೋಣಿ ಚೀಲದಲ್ಲಿ ಅಕ್ರಮವಾಗಿ ತುಂಬಿಸಿಟ್ಟಿದ್ದ ಸುಮಾರು ಸಾವಿರಕ್ಕೂ ಅಧಿಕ ಚೀಲ ಮರಳುಗಳನ್ನು ಸೀಝ್ ಮಾಡಿ ಅಲ್ಲೆ ದಾಸ್ತಾನು ಮಾಡಿ ತೆರಳಿದ್ದರು.
ತಹಶೀಲ್ದಾರ್ ಸೀಝ್ ಮಾಡಿದ ಮರಳು ಚೀಲಗಳನ್ನು ಗುರುವಾರ ರಾತ್ರೋ ರಾತ್ರಿ ಅದ್ಯಾರೋ ಮರಳು ಮಾಫಿಯಾ ಕುಳಗಳು ಕಳ್ಳತನ ಮಾಡಿ ಹೊತ್ತೊಯ್ದಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳೀಯ ಮಾಫಿಯಾಗಳೇ ಅಧಿಕಾರಿಗಳು ಸೀಝ್ ಮಾಡಿದ್ದ ಮರಳನ್ನು ಕಳವು ಮಾಡಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ತಲೆಮೊಗರು ನೇತ್ರಾವತಿ ನದಿ ತಟದಲ್ಲಿ ಹೈಕೋರ್ಟ್ ತಡೆಯಾಜ್ಞೆ ಉಲ್ಲಂಘಿಸಿ ಕಳೆದ ಹಲವು ಸಮಯಗಳಿಂದ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದ ಸ್ಥಳೀಯವಾಗಿ ಆಗುತ್ತಿದ್ದ ತೊಂದರೆ ಬಗ್ಗೆ ಹೇಳಿಕೊಂಡರೆ ಗೂಂಡಾ ಪಡೆಗಳ ಮೂಲಕ ಜನರನ್ನು ಹೆದರಿಸಿ ತಹಬಂದಿಗೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದ್ದು, ಇದರಿಂದ ನೊಂದ ಗ್ರಾಮಸ್ಥರು ತಾಲೂಕು ತಹಶೀಲ್ದಾರ್ ಗೆ ಲಿಖಿತವಾಗಿ ದೂರಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಸೋಮವಾರ ಸ್ಥಳಕ್ಕೆ ದಾಳಿ ನಡೆಸಿದ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳು ಸ್ಥಳದಲ್ಲಿ ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ಸುಮಾರು 1000 ಕ್ಕೂ ಅಧಿಕ ಗೋಣಿ ಮರಳನ್ನು ಮುಟ್ಟುಗೋಲು ಹಾಕಿದ್ದರು. ಈ ಪೈಕಿ ಸುಮಾರು 800ಕ್ಕೂ ಅಧಿಕ ಚೀಲ ಮರಳು ಕಳೆದ ಗುರುವಾರ ರಾತ್ರಿ ಇದ್ದಕ್ಕಿದ್ದಂತೆ ಮಾಯವಾಗಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಮರಳು ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
0 comments:
Post a Comment