ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ಸಂಕಷ್ಟದಲ್ಲಿ ಬೆಂಕಿ ಬಿದ್ದಿರುವ ಮನೆಗಳಲ್ಲಿ ಗಳ ಇರಿಯುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಕೊರೋನಾದಿಂದ ಜನತೆ ತೀವ್ರ ಆತಂಕ ಮತ್ತು ಸಂಕಷ್ಟದಲ್ಲಿದ್ದಾರೆ. ಜನತೆ ಬೀದಿ ಬೀದಿಯಲ್ಲಿ ಹೆಣ ಹೊತ್ತು ತಿರುಗಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಕ್ರಮ ನಡೆಸಲು ಇವರಿಗೆ ನಾಚಿಕೆಯಾಗುವುದಿಲ್ಲವೇ ಎಂದವರು ಅತೀವ ಆಕ್ರೋಶ ವ್ಯಕ್ತಪಡಿಸಿದರು.
ಕೊರೋನಾ ಸಂದರ್ಭದಲ್ಲಿ ಆಗಿರುವ ಒಂದೊಂದೇ ಅಕ್ರಮಗಳು ಬೆಳಕಿಗೆ ಬರುತ್ತಿವೆ. ಆರೋಗ್ಯ ಇಲಾಖೆಯಿಂದ ಪರಿಕರಗಳು ಸರಬರಾಜು ಆಗದೆ ಹಣ ಪಾವತಿಸಿರುವ ಮಾಹಿತಿ ತಮ್ಮ ಬಳಿ ಇದೆ. ಈ ಕುರಿತು ಹೆಚ್ಚಿನ ದಾಖಲೆಗಳನ್ನು ಸಂಗ್ರಹಿಸುತ್ತೀದ್ದೇವೆ. ಒಟ್ಟು ಕೊರೋನಾಗಾಗಿ 4,000 ಕೋಟಿ ರೂಪಾಯಿ ಪಾವತಿಸಿದ್ದು, ಈ ಪೈಕಿ 2000 ಕೋಟಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದವರು ಆಗ್ರಹಿಸಿದರು.
ಕಾಂಗ್ರೆಸ್ ಜನರ ಪರವಾಗಿ ಹೋರಾಟ ಮಾಡಲಿದೆ. ಜನರ ತೆರಿಗೆ ಹಣದ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದೇವೆ. ಕೊರೊನಾ ಚಿಕಿತ್ಸಾ ಉಪಕರಣ ಖರೀದಿಯಲ್ಲಿ ಯಾವುದೇ ಹಗರಣ ನಡೆದಿಲ್ಲ. ಕೇವಲ 320 ಕೋಟಿ ಮಾತ್ರ ಖರ್ಚು ಮಾಡಲಾಗಿದೆ ಎಂಬ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಸರ್ಕಾರದ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಹಲವು ಅಂಕಿ ಅಂಶಗಳನ್ನು ಬಹಿರಂಗಪಡಿಸಿದರು.
ಕೇವಲ 320 ಕೋಟಿ ರೂಪಾಯಿಗಿಂತ ಒಂದು ಪೈಸೆ ಹೆಚ್ಚು ಖರ್ಚು ಮಾಡಿಲ್ಲ ಎಂದು ಸಚಿವರು ಹೇಳಿದ್ದಾರೆ. ಆದರೆ ಆರೋಗ್ಯ ಇಲಾಖೆ 750 ಕೋಟಿ ರೂಪಾಯಿ, ಬಿಬಿಎಂಪಿ 200 ಕೋಟಿ ರೂಪಾಯಿ, ಕಾರ್ಮಿಕ ಇಲಾಖೆ 1 ಸಾವಿರ ಕೋಟಿ ರೂಪಾಯಿ, ಶಿಕ್ಷಣ ಇಲಾಖೆ 815 ಕೋಟಿ ರೂಪಾಯಿ, ಜಿಲ್ಲಾಡಳಿತದಿಂದ 740 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಸರ್ಕಾರ ಅಲ್ಪಸಂಖ್ಯಾತ, ಒಬಿಸಿ ಆಯೋಗದ ಮುಂದೆ ಹೇಳಿಕೆ ನೀಡಿದೆ.
ಎರಡು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ ಎಂದಿದ್ದಾರೆ. ಸಮಾಜಕಲ್ಯಾಣ, ಮಹಿಳಾ ಕಲ್ಯಾಣ, ಗೃಹ ಇಲಾಖೆಯಿಂದಲೂ 500 ಕೋಟಿ ರೂಪಾಯಿ ಖರ್ಚಾಗಿದೆ. ಹಾಸಿಗೆ, ದಿಂಬು ಖರೀದಿಗೆ 150 ಕೋಟಿ ರೂಪಾಯಿ ಸೇರಿ ಒಟ್ಟು 4,162 ಕೋಟಿ ರೂಪಾಯ ಹಣ ವೆಚ್ಚವಾಗಿದೆ ಎಂದರು. ತಮ್ಮಲ್ಲಿ ದಾಖಲೆ ಇದ್ದರೆ ಪ್ರದರ್ಶಿಸಲಿ ಎಂದು ಸವಾಲು ಹಾಕಿದ್ದ ಆರೋಗ್ಯ ಸಚಿವ ಶ್ರೀರಾಮುಲು ಪ್ರಶ್ನೆಗೆ ಸಿದ್ದು ಅಂಕಿ ಅಂಶಗಳ ಸಹಿತ ತಿರುಗೇಟು ನೀಡಿದರು.
ಸಚಿವರು, ಅಧಿಕಾರಿಗಳು 2 ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ಸಚಿವರಾದ ರಾಮುಲು, ಅಶ್ವಥ್ ನಾರಾಯಣ ಯಾಕೆ ಸುಳ್ಳು ಹೇಳಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಎಲ್ಲಿ ಹೋಯಿತು ನಿಮ್ಮ ಸರ್ಕಾರದ ಪ್ರಾಮಾಣಿಕತೆ ಎಂದು ಝಾಡಿಸಿದ ಸಿದ್ದರಾಮಯ್ಯ ಖಜಾನೆಯ ಒಂದೊಂದು ಪೈಸೆಗೂ ಸರ್ಕಾರ ಲೆಕ್ಕ ಇಡಬೇಕು ಎಂದರು.
ವೈದ್ಯಕೀಯ ಪರಿಕರಗಳ ಖರೀದಿ ಅವ್ಯವಹಾರದ ಬಗ್ಗೆ ಆರೋಪಿಸಿ, ಉತ್ತರ ಕೇಳಿದ್ದೇನಾದರೂ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಪ್ರಶ್ನಿಸಿದ 17 ದಿನಗಳ ನಂತರ ಉಪಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಸುದ್ದಿಗೋಷ್ಠಿ ನಡೆಸಿ 324 ಕೋಟಿ ರೂಪಾಯಿ ವೆಚ್ಚದ ಖರೀದಿ ನಡೆದಿದೆ ಎಂದಿದ್ದರು. ಆದರೆ ಸಿದ್ದರಾಮಯ್ಯ ಮಾಡಿರುವ ಎರಡು ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಸುಳ್ಳು ಎಂದಿದ್ದಾರೆ. ಪುರಾವೆ ನೀಡಿದರೆ ರಾಜೀನಾಮೆ ಕೊಡುವುದಾಗಿ ಶ್ರೀರಾಮುಲು ಹೇಳಿದ್ದರು. ಮುಖ್ಯಮಂತ್ರಿ ಕೂಡ ಯಾವುದೇ ಅವ್ಯವಹಾರ ಆಗಿಲ್ಲ ಎಂದಿದ್ದರು. 24 ಗಂಟೆಯೊಳಗೆ ಮಾಹಿತಿ ಕೊಡುವುದಾಗಿ ಹೇಳಿ ಇದೂವರೆಗೂ ಯಾವುದೇ ವಿವರಗಳನ್ನು ಕೊಟ್ಟಿಲ್ಲ. ಯಡಿಯೂರಪ್ಪ ಸುಳ್ಳು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ತಾವು ಸರ್ಕಾರಕ್ಕೆ ಈವರೆಗೆ 20 ಪತ್ರಗಳನ್ನು ಬರೆದಿದ್ದರೂ ಇಲ್ಲಿಯವರೆಗೆ ಒಂದೇ ಒಂದು ಉತ್ತರ ಕೊಟ್ಟಿಲ್ಲ. ಉತ್ತರ ಕೊಡಲು ಇಷ್ಟು ದಿನ ಬೇಕೇ ಎಂದು ಕೇಳಿದ ಸಿದ್ದು, ಸರ್ಕಾರದಲ್ಲಿ ಪಾರದರ್ಶಕತೆ ಇದ್ದಿದ್ದರೆ ಸತ್ಯ ಹೇಳುತ್ತಿದ್ದರು. ಪ್ರತಿಪಕ್ಷ ನಾಯಕನಾಗಿರುವ ತಮಗೆ ಸರ್ಕಾರ ಮಾಹಿತಿ ಕೊಡುವುದಿಲ್ಲ ಎಂದರೆ ಹೇಗೆ? ಇಂತವರನ್ನು ಜನ ನಂಬುವುದಾದರೂ ಹೇಗೆ? ಕೊರೋನಾ ನಿಯಂತ್ರಣ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಜನರ ಜೀವ ಉಳಿಸಲು ನಮ್ಮ ಸಹಕಾರ ಇದ್ದೇ ಇದೆ. ಆದರೆ ಇಂತಹ ಸಂದರ್ಭದಲ್ಲಿ ಲೂಟಿ ಹೊಡೆಯಲು ಹೇಗೆ ಸಹಕಾರ ಕೊಡುವುದು? ಕೊರೊನಾದಲ್ಲಿ ಸರ್ಕಾರದ ಭ್ರಷ್ಟತೆಗೆ ಉತ್ತರ ಕೊಡಬೇಕು ಎಂಬುದು ತಮ್ಮ ಹಾಗೂ ಜನರ ಪ್ರಶ್ನೆಯಾಗಿದೆ. ಭ್ರಷ್ಟಾಚಾರದ ಬಗ್ಗೆ ನಾವು ತಿಳಿಸದಿದ್ದರೆ ಜನದ್ರೋಹವಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಪಕ್ಷ ಪ್ರಮುಖರಾದ ರಮೇಶ್ ಕುಮಾರ್, ವಿ.ಆರ್. ಸುದರ್ಶನ್, ವಿ.ಎಸ್. ಉಗ್ರಪ್ಪ ಉಪಸ್ಥಿತರಿದ್ದರು.
0 comments:
Post a Comment