ಗ್ರಾಮ ಪಂಚಾಯತ್ ನಿರ್ಲಕ್ಷ್ಯ ವಿಕೋಪಕ್ಕೆ ಕಾರಣ : ಎಸ್. ಅಬೂಬಕ್ಕರ್ ಆರೋಪ
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಮುಂಗಾರು ಚುರುಕುಗೊಂಡಿದ್ದು, ಭಾರೀ ಮಳೆಯಾಗುತ್ತಿದೆ. ಸಜಿಪನಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲಗುತ್ತು ಪ್ರದೇಶವು ಮಳೆಯಿಂದಾಗಿ ಸಂಪೂರ್ಣ ಜಲಾವೃತಗೊಂಡಿದೆ. ಕಳೆದ ಎರಡು ಮೂರು ವರ್ಷಗಳಿಂದಲೂ ಈ ಪ್ರದೇಶದಲ್ಲಿ ಮಳೆ ಜೋರಾಗಿ ಸುರಿದ ಸಂದರ್ಭ ಮಳೆ ನೀರು ಹರಿದು ಹೋಗದೆ ಇಲ್ಲಿನ ಮನೆಗಳಿಗೆ ನುಗ್ಗುತ್ತಲೇ ಇದೆ. ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದಲೇ ಈ ಆವಾಂತರ ಸೃಷ್ಟಿಯಾಗುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿ ವರ್ಷವೂ ಇಲ್ಲಿನ ನಿವಾಸಿಗಳು ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತದ ಗಮನಕ್ಕೆ ತರುತ್ತಿದ್ದಾರಾದರೂ ಪಂಚಾಯತ್ ಆಡಳಿತವು ಸೂಕ್ತ ಚರಂಡಿಯ ವ್ಯವಸ್ಥೆಯನ್ನು ಮಾಡದೇ, ಇರುವ ಚರಂಡಿಯ ಹೂಲೆತ್ತುವ ಕಾರ್ಯ ಕೈಗೊಳ್ಳದೆ ತೀರಾ ನಿರ್ಲಕ್ಷ್ಯ ತೋರಿದ ಪರಿಣಾಮ ಇಲ್ಲಿನ ಹತ್ತಾರು ಮನೆಗಳಿಗೆ ಮಳೆ ನೀರು ನುಗ್ಗಿ ಕೃತಕ ನೆರೆ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಆರೋಪಿಸಲಾಗಿದೆ.
ಪಂಚಾಯತ್ ನಿರ್ಲಕ್ಷ್ಯವೇ ಅವಾಂತಕ್ಕೆ ಕಾರಣ : ಅಬೂಬಕ್ಕರ್ ಆರೋಪ
ಸಜಿಪನಡು ಗ್ರಾಮ ಪಂಚಾಯತಿನಲ್ಲಿ ಎಸ್ಡಿಪಿಐ ಹಾಗೂ ಬಿಜೆಪಿ (ಅಧ್ಯಕ್ಷ ಎಸ್ಡಿಪಿಐ ಉಪಾಧ್ಯಕ್ಷೆ ಬಿಜೆಪಿ) ಕಳೆದ 5 ವರ್ಷಗಳಲ್ಲಿ ಆಡಳಿತ ನಡೆಸಿದ್ದು ಗ್ರಾಮದಲ್ಲಿ ಯಾವುದೇ ಜನಪರ ಕಾರ್ಯಗಳನ್ನು ಮಾಡದೇ ವ್ಯರ್ಥ ಕಾಲಹರಣ ಮಾಡಿರುವುದರ ಪ್ರತಿಫಲನ ಇದೀಗ ಆಗುತ್ತಿದೆ ಎಂದು ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಉಪಾಧ್ಯಕ್ಷ ಅಬೂಬಕ್ಕರ್ ಸಜಿಪ ಆರೋಪಿಸಿದ್ದಾರೆ.
ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆ, ಸಮುದಾಯ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತ್ ಕಚೇರಿಗಳಿಗೆ ತಮ್ಮ ಅಧಿಕಾರಾವಧಿಯ ಕೊನೆಯ ಕ್ಷಣಗಳಲ್ಲಿ ಬರೇ ಸುಣ್ಣ ಬಣ್ಣವನ್ನು ಬಳಿದು ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳ ಮುಖಾಂತರ ಹರಿಯಬಿಟ್ಟು ಇದು ನಮ್ಮ ಮಾಹಾ ಸಾಧನೆ ಎಂಬಂತೆ ಬಿಂಬಿಸಿ ಪುಕ್ಕಟೆ ಪ್ರಚಾರ ಪಡೆಯುವ ವ್ಯರ್ಥ ಪ್ರಯತ್ನವನ್ನು ಮಾಡುವ ಮುಖಾಂತರ ಪಂಚಾಯತ್ ಆಡಳಿತ ಅಪಹಾಸ್ಯಕ್ಕೀಡಾಗುತ್ತಿದೆಯಲ್ಲದೇ ಗ್ರಾಮಸ್ಥರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದಿರುವ ಅವರು ಗ್ರಾಮ ಪಂಚಾಯತ್ ಆಡಳಿತ ಏನಾದರೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ್ದರೆ ಇಂತಹಾ ಘಟನೆಗಳು ಮರುಕಳಿಸುತ್ತಿರಲಿಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.
0 comments:
Post a Comment