ಕಾಪು ಶಾಸಕ ಲಾಲಾಜಿ ಮೆಂಡನ್ ಗೆ ಖೊಕ್
ಬೆಂಗಳೂರು (ಕರಾವಳಿ ಟೈಮ್ಸ್) : ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿದ ತಕ್ಷಣವೇ ಕಮಲ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡ ಪರಿಣಾಮ ಆಯ್ಕೆ ಪಟ್ಟಿಯಿಂದ ನಾಲ್ಕು ಮಂದಿಯ ಹೆಸರನ್ನು ಕೈ ಬಿಡಲಾಗಿದೆ.
ಅಧಿಕೃತ ಆದೇಶದ ವೇಳೆ ನಾಲ್ವರ ಹೆಸರನ್ನು ಕೈ ಬಿಡುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದು, ಈ ಹಿನ್ನೆಲೆ ಲಾಲಾಜಿ ಮೆಂಡನ್, ಜಿ.ಎಚ್. ತಿಪ್ಪಾರೆಡ್ಡಿ, ಬಸವರಾಜ್ ದಡೇಸುಗೂರ್ ಮತ್ತು ಪರಣ್ಣ ಮುನವಳ್ಳಿ ಅವರಿಂದ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನವನ್ನು ವಾಪಸ್ ಪಡೆಯಲಾಗಿದೆ. ಲಾಲಾಜಿ ಆರ್. ಮೆಂಡನ್ (ಕಾಪು) ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ತಿಪ್ಪಾರೆಡ್ಡಿ (ಚಿತ್ರದುರ್ಗ) ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಬಸವರಾಜ ದಡೇಸೂರ್ (ಕನಕಗಿರಿ) ರಾಜ್ಯ ಸಮಾಜ ಕಲ್ಯಾಣ ಅಭಿವೃದ್ಧಿ ಮಂಡಳಿ, ಪರಣ್ಣ ಮುನವಳ್ಳಿ (ಗಂಗಾವತಿ) ಅವರನ್ನು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಅಧಿಕೃತ ಆದೇಶಕ್ಕೂ ಮುನ್ನವೇ ಅಸಮಾಧಾನ ಭುಗಿಲೆದ್ದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತ್ತು. ಅಲ್ಲದೆ ಕೆಲ ಶಾಸಕರು ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದ್ದು, ನಮಗೇನೂ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ ಎನ್ನಲಾಗಿದೆ.
ತಾಂತ್ರಿಕ ಕಾರಣದಿಂದ ನಾಲ್ವರಿಗೆ ನೀಡಿದ್ದ ನಿಗಮ-ಮಂಡಳಿ ವಾಪಸ್ ಪಡೆಯಲಾಗಿದ್ದು, ಸಮಸ್ಯೆ ಸರಿಪಡಿಸಿ ನಿಗಮ-ಮಂಡಳಿಗಳನ್ನು ಮರು ಹಂಚಿಕೆ ಮಾಡಲಾಗುವುದು ಎಂದು ಸರಕಾರ ಹೇಳಿಕೊಂಡಿದೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿ ಒಂದು ವರ್ಷದ ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹಠಾತ್ ಆಗಿ ಕೆಲ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಘೋಷಿಸಿದ್ದರು. ಬಿಜೆಪಿ ಹೈಕಮಾಂಡ್, ರಾಜ್ಯ ಬಿಜೆಪಿ ಘಟಕಕ್ಕೆ ಮುಖ್ಯಮಂತ್ರಿ ಅವರ ಪಟ್ಟಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎನ್ನಲಾಗಿದೆ. ಅಲ್ಲದೆ ಸಿಎಂ ತಯಾರಿಸಿದ ಪಟ್ಟಿಯಿಂದ ಪಕ್ಷ, ಸಂಘದ ನಿಷ್ಠಾವಂತ ಶಾಸಕರಿಗೆ ಯಾವುದೇ ಪ್ರಾಧಾನ್ಯತೆ ಕಲ್ಪಿಸಲಾಗಿಲ್ಲ ಎನ್ನಲಾಗಿದೆ. ಈ ಎಲ್ಲ ಹಿನ್ನಲೆಯಿಂದ ಶಾಸಕರ ನಡುವೆ ಅಸಮಾಧಾನದ ಹೊಗೆ ಉಂಟಾಗಿತ್ತು. ಈ ಕಾರಣದಿಂದಾಗಿ ಇದೀಗ ಘೋಷಣೆಯಾದ ಪಟ್ಟಿಯಲ್ಲಿ ಬದಲಾವಣೆಯಾಗಿದೆ.
0 comments:
Post a Comment