ಭಾರತೀಯ ಅಂಚೆ ಇಲಾಖೆಯಿಂದ ರಾಖಿ ಕಳುಹಿಸಲು ವ್ಯವಸ್ಥೆ - Karavali Times ಭಾರತೀಯ ಅಂಚೆ ಇಲಾಖೆಯಿಂದ ರಾಖಿ ಕಳುಹಿಸಲು ವ್ಯವಸ್ಥೆ - Karavali Times

728x90

27 July 2020

ಭಾರತೀಯ ಅಂಚೆ ಇಲಾಖೆಯಿಂದ ರಾಖಿ ಕಳುಹಿಸಲು ವ್ಯವಸ್ಥೆ



ಮಂಗಳೂರು (ಕರಾವಳಿ ಟೈಮ್ಸ್) : ಭಾರತೀಯ ಅಂಚೆ ಇಲಾಖೆಯಿಂದ ರಾಖಿ ಪ್ರಿಯರಿಗೆ ಸಿಹಿ ಸುದ್ದಿ ನೀಡಲಾಗಿದೆ. ರಕ್ಷಾ ಬಂಧನ್ ಹಬ್ಬದ ದಿನ ದೂರದ ಊರಲ್ಲಿರುವ ಸಹೋದರನೊಂದಿಗೆ ಸಂತಸ ಹಂಚಿಕೊಳ್ಳಲು ಅಂಚೆ ಇಲಾಖೆ ಈ ಸೇವೆ ನೀಡುತ್ತಿದೆ. ಕೋವಿಡ್-19 ವೈರಸ್ಸಿನ‌ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅಂಗಡಿಗಳಿಗೆ ಅಲೆದಾಟದ ಪರದಾಟವಿಲ್ಲದೇ ಮನೆಯಲ್ಲಿ ಕುಳಿತು ಮೊಬೈಲ್‍ನಿಂದ ಅಂತರ್ಜಾಲದ ಮೂಲಕ ಸಹೋದರರಿಗೆ ರಾಖಿಯನ್ನು ಕಳುಹಿಸುವ ವಿನೂತನ ಪರಿಕಲ್ಪನೆಯನ್ನು ಭಾರತೀಯ ಅಂಚೆ ಇಲಾಖೆ ಜಾರಿಗೆ ತಂದಿದೆ.

 www.karnatakapost.gov.in ಮುಖಾಂತರ ಮನೆಯಲ್ಲಿ  ಕುಳಿತು ಕರ್ನಾಟಕ ರಾಜ್ಯದೊಳಗಿನ ಗ್ರಾಹಕರು ಭಾರತದ ಯಾವುದೇ ಪ್ರದೇಶಕ್ಕೂ ಕೂಡಾ ರಾಖಿಯನ್ನು ತ್ವರಿತ ಅಂಚೆ (ಸ್ಪೀಡ್ ಪೋಸ್ಟ್) ಮುಖಾಂತರ, ಬಹಳ ಸುಲಭವಾಗಿ, ಕೇವಲ 100 ರೂಪಾಯಿ ವೆಚ್ಚದಲ್ಲಿ ಕಳುಹಿಸಬಹುದು. 

ಈ ಸೇವಾ ಯೋಜನೆಯನ್ನು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶಾರದ ಸಂಪತ್ ಹಾಗೂ ಬೆಂಗಳೂರು ವೃತ್ತದ ಪೋಸ್ಟ್ ಮಾಸ್ಟರ್ ಜನರಲ್ ಶಿರ್ತಾಡಿ ರಾಜೇಂದ್ರ ಕುಮಾರ್ ಅವರು ಇತ್ತೀಚೆಗೆ ಲೋಕಾರ್ಪಣೆ ಮಾಡಿದ್ದು ಕಳೆದ ಕೆಲವು ವರುಷಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ದೊರೆಯುತ್ತಿದ್ದ ರಾಖಿ ಲಕೋಟೆಗಳಿಗೆ ಹೊಸ ಆಯಾಮ ದೊರೆತಂತಾಗಿದೆ. 

ಕೇವಲ ಸಹೋದರರಿಗೆ ಮಾತ್ರವಲ್ಲದೇ ಲಡಾಕ್ ಗಡಿ ಪ್ರದೇಶದಲ್ಲಿರುವ ಸೇನಾ ಯೋಧರಿಗೂ ರಾಖಿ ತಲುಪಿಸುವ ಅವಕಾಶವಿದ್ದು, ಅವರಿಗೆಂದೇ ಮುದ್ರಿತ ಸಂದೇಶವನ್ನು ಆಯ್ಕೆ ಮಾಡಿ ರವಾನಿಸಬಹುದಾಗಿದೆ. ಬಲು ಸರಳವಾದ ಪ್ರಕ್ರಿಯೆಯನ್ನು ಹೊಂದಿರುವ ಈ ಸೇವಾ ಯೋಜನೆಯಲ್ಲಿ www.karnatakapost.gov.in/Rakhi_Post ಗೆ ಲಾಗಿನ್ ಆಗಿ ಕಳುಹಿಸುವವರ ಪೂರ್ಣ ವಿವರಗಳನ್ನು ನೀಡಿ ಮುಂದುವರೆದಾಗ ಸುಮಾರು ಹನ್ನೊಂದು ವಿಧದ ಆಕರ್ಷಕ ವಿನ್ಯಾಸವುಳ್ಳ ರಾಖಿಗಳು ವೀಕ್ಷಣೆ ಮಾಡಲು ಲಭ್ಯವಿರುತ್ತದೆ.   ಪ್ರತಿಯೊಂದು ವಿನ್ಯಾಸದ ಎದುರು ವಿನ್ಯಾಸ ಅಂಕಿ ನಮೂದಿಸಿದ್ದು ನಮಗೆ ಬೇಕಾದ ವಿನ್ಯಾಸವನ್ನು ಆರಿಸಿ ಮುಂದುವರೆದಾಗ ಸಂದೇಶ ಕಳುಹಿಸುವ ಆಯ್ಕೆ ಕಾಣ ಸಿಗುತ್ತದೆ. ಸುಮಾರು ಮೂರು ರೀತಿಯ ಮುದ್ರಿತ ಸಂದೇಶಗಳನ್ನು ಆಯ್ಕೆ ಮಾಡುವ ಇಲ್ಲವೇ ನಮಗೆ ಬೇಕಾದ ಸಂದೇಶವನ್ನು  ಫೋಟೊ ತೆಗೆದು ಕಳುಹಿಸುವ ಅವಕಾಶವೂ ಲಭ್ಯವಿದೆ. ಕೊನೆಯಲ್ಲಿ ಸ್ವೀಕರಿಸುವವರ ಪೂರ್ಣ ವಿವರಗಳನ್ನು ಬರೆಯಲು ಅವಕಾಶವಿದೆ.  ರಾಖಿಗಳು ಬಣ್ಣ ಬಣ್ಣದಲ್ಲಿ ಬರೆದ ಅರ್ಥಪೂರ್ಣ ಸಂದೇಶವನ್ನು ಹೊತ್ತು ವಿಶೇಷ ವಿನ್ಯಾಸದ ರಾಖಿ ಲಕೋಟೆಗಳೊಂದಿಗೆ ಸಹೋದರರನ್ನು ಇಲ್ಲವೇ ಸೇನಾ ಯೋಧರಿಗೆ ಸೇರುವ ಪರಿಕಲ್ಪನೆಯೇ ವಿಶಿಷ್ಟ. ರಾಖಿಗಳ ಸೀಮಿತ ದಾಸ್ತಾನು ಲಭ್ಯವಿದ್ದು ಈ ಸೇವಾ ವಿಧಾನದ ಮೂಲಕ ರಾಖಿ ಕಳುಹಿಸಲು ಇದೇ ತಿಂಗಳ 31ನೇ ತಾರೀಕು ಕೊನೆಯ ದಿನವಾಗಿರುತ್ತದೆ. ರಾಖಿ ಕಳುಹಿಸಲು 100/- ರೂಪಾಯಿ ಶುಲ್ಕವಾಗಿದ್ದು ಅದನ್ನು ಅಂತರ್ಜಾಲ ಬ್ಯಾಂಕಿಂಗ್, ನಮ್ಮದೇ ಇಲಾಖೆಯ ಐಪಿಪಿಬಿ, ಗೂಗಲ್ ಪೇ, ಭೀಮ್ ಆಪ್, ಫೋನ್ ಪೇ ಮುಂತಾದ ನೆಟ್ ಪೇಮೆಂಟ್ ವಿಧಾನದಲ್ಲಿ ನೀಡಬಹುದಾಗಿದೆ. ಮನೆಯೊಳಗೇ ಕುಳಿತು ಭಾರತದ ಯಾವುದೇ ಮೂಲೆಗೂ ಕಳುಹಿಸಬಹುದಾದ ಈ ಸೇವೆ ಅಪಾರ ಜನಮನ್ನಣೆ ಪಡೆದಿದ್ದು ಸಾಮಾನ್ಯ ಜನರಿಗೆ ಅನುಕೂಲಕರವಾಗಿದೆ ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.








  • Blogger Comments
  • Facebook Comments

0 comments:

Post a Comment

Item Reviewed: ಭಾರತೀಯ ಅಂಚೆ ಇಲಾಖೆಯಿಂದ ರಾಖಿ ಕಳುಹಿಸಲು ವ್ಯವಸ್ಥೆ Rating: 5 Reviewed By: karavali Times
Scroll to Top