ನವದೆಹಲಿ (ಕರಾವಳಿ ಟೈಮ್ಸ್) : ಮಹಾಮಾರಿ ಕೊರೊನಾ ವೈರಸ್ ದೇಶದಲ್ಲಿ ತನ್ನ ಕಬಂಧಬಾಹು ವಿಸ್ತರಿಸುತ್ತಲೇ ಇದ್ದು, ಈ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸರ್ಕಾರಕ್ಕೆ ಗಂಭೀರ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಕೂಡಲೇ ಸರ್ಕಾರ ಎಚ್ಚೆತ್ತು ಕೊರೊನಾ ಹರಡುವುದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ತಪ್ಪಿದಲ್ಲಿ ಆಗಸ್ಟ್ 10ರೊಳಗೆ ಸೋಂಕಿತರ ಸಂಖ್ಯೆ 20 ಲಕ್ಷ ದಾಟುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದವರು ಎಚ್ಚರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಈಗಾಗಲೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ. ಒಂದು ವೇಳೆ ಕೋವಿಡ್-19 ಪ್ರಕರಣಗಳ ಪತ್ತೆ ಹೀಗೆಯೇ ಮುಂದುವರಿದರೆ ಆಗಸ್ಟ್ 10ರೊಳಗೆ 20 ಲಕ್ಷ ದಾಟುತ್ತದೆ ಎಂದವರು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗ ಮತ್ತಷ್ಟು ಹರಡುವುದನ್ನು ತಡೆಯಲು ಸರ್ಕಾರ ಅಗತ್ಯ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಗುರುವಾರವಷ್ಟೇ ಟ್ವೀಟ್ ಮಾಡಿದ್ದ ರಾಹುಲ್, ಇದೇ ವಾರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟುತ್ತದೆ ಎಂದು ಹೇಳಿದ್ದರು. ಅಂತೆಯೇ ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದ್ದು, ಒಂದೇ ದಿನ 687 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದುವರೆಗೆ 25 ಸಾವಿರ ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಅಮೆರಿಕ ಹಾಗೂ ಬ್ರೆಜಿಲ್ ನಂತರ ಭಾರತ ಮೂರನೇ ಸ್ಥಾನದಲ್ಲಿದೆ.
0 comments:
Post a Comment