ಬೆಂಗಳೂರು (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶವನ್ನು ನಾಳೆ (ಮಂಗಳವಾರ) ಬೆಳಗ್ಗೆ 11.30ಕ್ಕೆ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಕುರಿತಂತೆ ನಿರ್ದೇಶನ ನೀಡಲಾಗಿದೆ. ನಾಳೆ ಅಧಿಕೃತ ಫಲಿತಾಂಶ ಪ್ರಕಟಣೆಯ ಬಳಿಕ ಉತ್ತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಮೊಬೈಲ್ ಮೂಲಕ ಸಂದೇಶ ರವಾನೆಯಾಗುವುದು. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನಾಳೆ ಮಧ್ಯಾಹ್ನ 12 ಗಂಟೆಯ ಬಳಿಕ ಸರ್ಕಾರದ ಅಧಿಕೃತ ಜಾಲತಾಣ www.karresults.nic.in ಗಳಲ್ಲಿಯೂ ಸಹ ನೋಡಬಹುದು ಎಂದರು.
ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವ ಅಗತ್ಯವಿಲ್ಲ. ಎಸ್‍ಎಂಎಸ್ ಮೂಲಕ ಮಕ್ಕಳಿಗೆ ಫಲಿತಾಂಶ ನೀಡಲಾಗುತ್ತದೆ. ಸುಮಾರು 6.75 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ನಾಳೆ ಹೊರಬೀಳಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ರಾಜ್ಯಾದ್ಯಂತ ಲಾಕ್‍ಡೌನ್ ಮಾಡುವ ಮೊದಲೇ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕಳೆದ ಮಾರ್ಚ್‍ನಲ್ಲಿ ಮಾಡಲಾಗಿತ್ತು. ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಲಾಕ್‍ಡೌನ್ ಸಡಿಲಿಕೆಯಾದ ನಂತರ ಜೂನ್ 18 ರಂದು ಇಂಗ್ಲೀಷ್ ಪರೀಕ್ಷೆ ಕೂಡಾ ಮಾಡಲಾಗಿತ್ತು.
ಈ ಬಾರಿ ಒಟ್ಟು 6 ಲಕ್ಷದ 80 ಸಾವಿರದ 49 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 3 ಲಕ್ಷದ 38 ಸಾವಿರದ 431 ವಿದ್ಯಾರ್ಥಿಗಳು ಹಾಗೂ 3 ಲಕ್ಷದ 41 ಸಾವಿರದ 618 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. ರಾಜ್ಯಾದ್ಯಂತ 1016 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ.
ಕೊರೊನಾದಿಂದ ಮುಂದೂಡಲ್ಪಟ್ಟಿದ್ದ ಇಂಗ್ಲೀಷ್ ಪರೀಕ್ಷೆಗೆ ಕೋವಿಡ್-19 ಭಯದಿಂದ 27,022 ವಿದ್ಯಾರ್ಥಿಗಳು ಗೈರಾಗಿದ್ದರು. ರಾಜ್ಯದಲ್ಲಿ ಒಟ್ಟು 5,95,997 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಆದರೆ 5,68,975 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದಾರೆ. ಜೊತೆಗೆ ಹೊರ ರಾಜ್ಯದ 1,889 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 18,529 ವಿದ್ಯಾರ್ಥಿಗಳು ಅಂತರ್ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದು ಪಿಯುಸಿ ಬೋರ್ಡ್ ಅಧಿಕೃತ ಮಾಹಿತಿ ನೀಡಿತ್ತು.
0 comments:
Post a Comment