ಮಂಗಳೂರು (ಕರಾವಳಿ ಟೈಮ್ಸ್) : ತಾಲೂಕಿನ ನಾಟೆಕಲ್‍ನಿಂದ ಮಂಜನಾಡಿವರೆಗಿನ ರಸ್ತೆ ಬದಿಯಲ್ಲಿರುವ ತ್ಯಾಜ್ಯಗಳನ್ನು ತೆರವುಗೊಳಿಸಬೇಕು ಮತ್ತು ಇಲ್ಲಿನ ಉರುಮನೆ ಪ್ರದೇಶದ ವ್ಯಾಪ್ತಿಯ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕು ಎಂದು ಒತ್ತಾಯಿಸಿ ಡಿವೈಎಫ್‍ಐ ವತಿಯಿಂದ ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನಾಟೆಕಲ್‍ನಿಂದ ಮಂಜನಾಡಿವರೆಗೆ ರಸ್ತೆ ತಿರುವುಗಳಿಂದ ಕೂಡಿದ್ದು ಇಲ್ಲಿ ತ್ಯಾಜ್ಯಗಳ ರಾಶಿ ಸಂಗ್ರಹವಾಗಿರುವುದರಿಂದ ನಾಯಿಗಳೂ ತುಂಬಿವೆ. ರಸ್ತೆಗೆ ಅಡ್ಡ ಬರುವ ನಾಯಿಗಳನ್ನು ತಪ್ಪಿಸಲು ಹೋಗಿ ರಸ್ತೆಗೆ ಬಿದ್ದು ಗಾಯಗೊಂಡ ಬೈಕ್ ಸವಾರರಿಗೆ ಲೆಕ್ಕವೇ ಇಲ್ಲ. ಅಲ್ಲದೆ ಇದೀಗ ಮಳೆಗಾಲ ಪ್ರಾರಂಭವಾಗಿದ್ದು, ಡೆಂಗ್ಯೂ, ಮಲೇರಿಯಾ ಮೊದಲಾದ ಸಾಂಕ್ರಾಮಿಕ ರೋಗಗಳ ಭೀತಿಯೂ ಆರಂಭವಾಗಿದೆ.
ಈ ಬಗ್ಗೆ ಈ ಹಿಂದೆಯೂ ಮನವಿ ನೀಡಲಾಗಿದ್ದು, ಈ ಸಂದರ್ಭ ಪಿಡಿಒ ಅವರು ಒಂದು ಬಾರಿ ತ್ಯಾಜ್ಯ ವಿಲೇವಾರಿ ಮಾಡಿ ಸುಮ್ಮನಾಗಿದ್ದಾರೆ. ಕೂಡಲೇ ಇಲ್ಲಿನ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಇಲ್ಲಿ ಕಸದ ತೊಟ್ಟಿಗಳನ್ನು ಸ್ಥಾಪಿಸಿ ಪ್ರತಿದಿನ ವಿಲೇವಾರಿ ಮಾಡಬೇಕು, ಇಲ್ಲಿನ ಉರುಮನೆ ಪ್ರದೇಶಕ್ಕೆ 8 ದಿನಗಳಿಗೊಮ್ಮೆ ಕುಡಿಯುವ ನೀರು ಬಿಡಲಾಗುತ್ತಿದೆ. ಇದರ ಬಗ್ಗೆ ಗಮನ ಹರಿಸಿ ಈ ವ್ಯಾಪ್ತಿಯ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆ.ಸಿ.ರೋಡ್, ಉಪಾಧ್ಯಕ್ಷ ರಝಾಕ್ ಮೊಂಟೆಪದವು, ದೇರಳಕಟ್ಟೆ ಘಟಕದ ಅಧ್ಯಕ್ಷ ನವಾಝ್ ಉರುಮಣೆ, ಕಾರ್ಮಿಕ ಮುಖಂಡ ಇಬ್ರಾಹಿಂ ಮದಕ, ರಿಯಾಝ್ ಮದಕ, ಸಾಹಿತಿ ಮಹಮ್ಮದ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment