ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ನಬೈಲ್ ಎಂಬಲ್ಲಿ ಖಾಸಗಿ ಜಮೀನಿನಲ್ಲಿ ಕಾಂಕ್ರಿಟ್ ಮಿಕ್ಸಿಂಗ್ ಘಟಕವೊಂದು ಕಾರ್ಯಾಚರಣೆ ಆರಂಭಿಸಿದ್ದು ಇದರಿಂದಾಗಿ ಗ್ರಾಮಸ್ಥರು ಹಾಗೂ ಸಾರ್ವಜನಿಕರು ತೀವ್ರ ತೊಂದರೆಗೆ ಒಳಾಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟಕದ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‍ಐ) ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಬುಧವಾರ ತಾಲೂಕು ತಹಶೀಲ್ದಾರರಿಗೆ ಮನವಿ ನೀಡಿ ಆಗ್ರಹಿಸಿದೆ.
ಈ ಕಾಂಕ್ರಿಟ್ ಮಿಕ್ಸಿಂಗ್ ಘಟಕವು ತಿಂಗಳುಗಳ ಹಿಂದೆ ಆರಂಭಗೊಂಡಿದ್ದು, ಲಾಕ್‍ಡೌನ್ ಸಂದರ್ಭ ಕೆಲದಿನ ಸ್ಥಗಿತಗೊಳಿಸಲಾಗಿತ್ತು. ಬಳಿಕ ಲಾಕ್‍ಡೌನ್ ಸಂಪೂರ್ಣ ಸರಳಗೊಳ್ಳುವುದಕ್ಕಿಂತಲೂ ಮೊದಲೇ ಮತ್ತೆ ಕಾರ್ಯಾಚರಣೆ ಆರಂಭಗೊಂಡಿದೆ. ಘಟಕ ಆರಂಭವಾದಾಗಿನಿಂದ ಇಲ್ಲಿಗೆ ನಿರಂತರ ಜಲ್ಲಿ ಹಾಗೂ ಕಾಂಕ್ರಿಟ್ ಹೊತ್ತ ಟಿಪ್ಪರ್, ಲಾರಿ ಸಹಿತ ಇನ್ನಿತರ ವಾಹನಗಳು ಎಗ್ಗಿಲ್ಲದೆ ಸಂಚಾರ ನಡೆಸುತ್ತಿದ್ದು, ಪರಿಣಾಮ ಇಲ್ಲಿನ ರಾಜ್ಯ ಹೆದ್ದಾರಿಗೆ ಹಾನಿ ಸಂಭವಿಸುತ್ತಲೇ ಇದೆ. ಅಲ್ಲದೆ ಈ ಲಾರಿಗಳ ಸಂಚಾರದಿಂದಾಗಿ ಸ್ಥಳೀಯವಾಗಿ ಧೂಳಿನ ಸಮಸ್ಯೆ ವಿಪರೀತವಾಗಿದ್ದು, ಇದೀಗ ಮಳೆ ಸುರಿಯತ್ತಿರುವುದರಿಂದ ಹೆದ್ದಾರಿ ಸಂಪೂರ್ಣ ಕೆಸರುಮಯವಾಗಿರುತ್ತದೆ. ರಸ್ತೆ ಸಂಪೂರ್ಣ ಕೆಸರುಮಯವಾಗಿರುವುದರಿಂದ ಇಲ್ಲಿ ಅಪಘಾತಗಳು ಸಂಭವಿಸುವ ಅಪಾಯವೂ ಹೆಚ್ಚಾಗಿದೆ. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದಾಗಿ ಅದನ್ನು ತಪ್ಪಿಸುವ ಭರದಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ಸವಾರರು ತೀವ್ರ ಅಪಾಯಕರ ಸನ್ನಿವೇಶ ಎದುರಿಸುತ್ತಿದ್ದಾರೆ. ಅವೈಜ್ಞಾನಿಕ ಸಾಗಾಟದ ವೇಳೆ ರಸ್ತೆಯಲ್ಲೇ ಬೀಳುತ್ತಿರುವ ಜಲ್ಲಿ ಕಲ್ಲುಗಳು ವಾಹನಗಳ ಚಕ್ರಕ್ಕೆ ಸಿಲುಕಿ ಇನ್ನೊಂದು ವಾಹನಗಳ ಗಾಜಿಗೆ ರಟ್ಟುವುದರಿಂದ ವಾಹನಗಳ ಗಾಜುಗಳು ಪುಡಿಯಾದ ಉದಾಹರಣೆಗಳೂ ಸಾಕಷ್ಟಿದೆ. ಜನರಿಗೂ ಇದರಿಂದ ಅಪಾಯ ಎದುರಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಘಟಕಕ್ಕೆ ಸಂಬಂಧಿಸಿದ ಮಂದಿಗಳು ಉಡಾಫೆ ಹಾಗೂ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಜನರ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಡಿವೈಎಫ್‍ಐ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ.
ಘಟಕ ಕಾರ್ಯಾಚರಿಸುತ್ತಿರುವ ಪರಿಸರದಲ್ಲಿ ಶಾಲೆ, ಅಂಗನವಾಡಿ ಕೇಂದ್ರಗಳು ಕೂಡಾ ಕಾರ್ಯಾಚರಿಸುತ್ತಿದ್ದು, ಇಲ್ಲಿಗೆ ಬರುವ ಮಕ್ಕಳ ಸಹಿತ ಹಿರಿಯರಿಗೆ ಹಾಗೂ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಅನಾರೋಗ್ಯ ಸಂಬಂಧಿ ಸಮಸ್ಯೆಗಳೂ ತಲೆದೋರುತ್ತಿದೆ. ಈ ಎಲ್ಲಾ ಕಾರಣಳಿಂದ ಈ ಘಟಕದ ವಿರುದ್ಧ ಕ್ರಮಕೈಗೊಳ್ಳ ಬೇಕೆಂದು ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‍ಐ) ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಮನವಿಗೆ ಸೂಕ್ತ ಸ್ಪಂದನೆ ದೊರೆಯದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯರು, ವಾಹನ ಸವಾರರ ಸಹಕಾರದೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಸಿದ್ದಾರೆ.
ನಿಯೋಗದಲ್ಲಿ ಡಿವೈಎಫ್‍ಐ ಬಂಟ್ವಾಳ ತಾಲೂಕು ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ಕಾರ್ಯದರ್ಶಿ, ನ್ಯಾಯವಾದಿ ತುಳಸೀದಾಸ್ ವಿಟ್ಲ, ಕಾರ್ಮಿಕ ಮುಖಂಡ ಎ ರಾಮಣ್ಣ ವಿಟ್ಲ, ಖಲೀಲ್ ಮೊದಲಾದವರು ಇದ್ದರು.
0 comments:
Post a Comment