ಲಾಕ್ ಡೌನ್ ಮಾಡಿದರೆ ಸಾಲದು, ಜನಸಾಮಾನ್ಯರ ಕಷ್ಟಗಳಿಗೆ ಪರಿಹಾರ ಒದಗಿಸಬೇಕು. : ಸಾಮಾಜಿಕ ಹೋರಾಟಗಾರರ ಆಗ್ರಹ - Karavali Times ಲಾಕ್ ಡೌನ್ ಮಾಡಿದರೆ ಸಾಲದು, ಜನಸಾಮಾನ್ಯರ ಕಷ್ಟಗಳಿಗೆ ಪರಿಹಾರ ಒದಗಿಸಬೇಕು. : ಸಾಮಾಜಿಕ ಹೋರಾಟಗಾರರ ಆಗ್ರಹ - Karavali Times

728x90

16 July 2020

ಲಾಕ್ ಡೌನ್ ಮಾಡಿದರೆ ಸಾಲದು, ಜನಸಾಮಾನ್ಯರ ಕಷ್ಟಗಳಿಗೆ ಪರಿಹಾರ ಒದಗಿಸಬೇಕು. : ಸಾಮಾಜಿಕ ಹೋರಾಟಗಾರರ ಆಗ್ರಹ



ಬಂಟ್ವಾಳ (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಒಂದು ವಾರಗಳ ಕಾಲ ಪೂರ್ಣ ಲಾಕ್‍ಡೌನ್ ಘೋಷಿಸಿದೆ. ಕೊರೋನಾ ಸೋಂಕು ಹತೋಟಿಗೆ ತರಲು ಲಾಕ್‍ಡೌನ್ ಒಂದು ಪೂರ್ಣ ಪ್ರಮಾಣದ ಪರಿಹಾರ ಅಲ್ಲದಿದ್ದರೂ, ಜಿಲ್ಲಾಡಳಿತ ಜನತೆಯ ನಡುವೆ ಹರಡಿರುವ ಭೀತಿಯನ್ನು ಮುಂದಿಟ್ಟು ಲಾಕ್‍ಡೌನ್ ಮೂಲಕ ಕೊರೋನಾ ಸೋಂಕು ನಿರ್ವಹಣೆಯಲ್ಲಿನ ವೈಫಲ್ಯಗಳನ್ನು ಮುಚ್ಚಿಡಲು ಯತ್ನಿಸುತ್ತಿದೆ. ಅದೇ ಸಂದರ್ಭ ಲಾಕ್‍ಡೌನ್‍ನಿಂದಾಗಿ ಉದ್ಯೋಗದ ಅವಕಾಶ ಕಳೆದುಕೊಳ್ಳುವ ಅಸಂಘಟಿತ ಕಾರ್ಮಿಕರು, ಸಣ್ಣ ಸಂಬಳದ ನೌಕರರು ಮುಂತಾದ ಅಂದಂದಿನ ದುಡಿಮೆಯನ್ನೇ  ನೆಚ್ಚಿಕೊಂಡಿರುವ ವಿಭಾಗಗಳಿಗೆ ಲಾಕ್‍ಡೌನ್ ಅವಧಿಯಲ್ಲಿ ಬದುಕು ನಡೆಸುವ ಯಾವ ದಾರಿಯನ್ನು ತೋರದೆ, ಪರಿಹಾರ ಒದಗಿಸದೆ ಬೇಜವಾಬ್ದಾರಿತನ ಮೆರೆದಿದೆ. ನಾವು ಜಿಲ್ಲಾಡಳಿತದ ಈ ಏಕಪಕ್ಷೀಯ ನಡೆಯನ್ನು ಖಂಡಿಸುತ್ತೇವೆ. ಲಾಕ್‍ಡೌನ್ ಸಂದರ್ಭ ಮನೆಯೊಳಗಡೆ ಬಂದಿಯಾಗುವ ಇಂತಹ ಜನ ವಿಭಾಗಗಳಿಗೆ ಆಹಾರ, ಔಷಧಿ ಮುಂತಾದ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತ ಒದಗಿಸಿಕೊಡಬೇಕು ಎಂದು ಆಗ್ರಹಿಸುತ್ತೇವೆ. ಬಹಳ ಮುಖ್ಯವಾಗಿ ಕೆಳಕಂಡ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ರಾಜಾ ಚೆಂಡ್ತಿಮಾರ್, ಕಾರ್ಮಿಕ ಮುಖಂಡ ಎ ರಾಮಣ್ಣ ವಿಟ್ಲ, ಡಿವೈಎಫ್‍ಐ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ಕಾರ್ಯದರ್ಶಿ, ನ್ಯಾಯವಾದಿ ತುಳಸೀದಾಸ್ ವಿಟ್ಲ ಅವರು ಜಂಟಿಯಾಗಿ ಆಗ್ರಹಿಸಿದ್ದಾರೆ.

ಲಾಕ್‍ಡೌನ್ ಸಂದರ್ಭ ದುಡಿಮೆಯ ಅವಕಾಶ ಕಳೆದುಕೊಳ್ಳುವ ಅಸಂಘಟಿತ ಕಾರ್ಮಿಕರು ಸೇರಿದಂತೆ ಬಡವರು, ಕಡಿಮೆ ಆದಾಯದ ಜನವಿಭಾಗಗಳಿಗೆ ಆಹಾರ, ಔಷಧಿಗಳನ್ನು ಜಿಲ್ಲಾಡಳಿತ ಒದಗಿಸಬೇಕು. ಬಾಡಿಗೆ ಮನೆಯಲ್ಲಿ ವಾಸ ಇರುವ ಇಂತಹ ವಿಭಾಗಗಳಿಗೆ ಮನೆ ಬಾಡಿಗೆಯಲ್ಲಿ ವಿನಾಯತಿ ದೊರಕಿಸಬೇಕು. ಕೊರೋನಾ ಸೋಂಕಿತರಿಗೆ ಸರಕಾರಿ ಆಸ್ಪತ್ರೆ, ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಯಾವುದೆ ತಾರತಮ್ಯವಿಲ್ಲದೆ ಉಚಿತ ಚಿಕಿತ್ಸೆ ಖಾತರಿಪಡಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕೊರೋನಾ ಸೋಂಕಿತರ ವೈದ್ಯಕೀಯ ವೆಚ್ಚ, ಆರೋಗ್ಯದ ಸ್ಥಿತಿಗತಿಗಳ ಮೇಲ್ವಿಚಾರಣೆಗೆ ವಿಶೇಷ ತಂಡ ನೇಮಿಸಬೇಕು. ಖಾಸಗಿ ಆಸ್ಪತ್ರೆಗಳು ಸರಕಾರ ನಿಗದಿಪಡಿಸಿದ ಮಾರ್ಗಸೂಚಿ ಪ್ರಕಾರವೇ ಚಿಕಿತ್ಸೆ ನೀಡುವುದನ್ನು ಖಾತರಿಪಡಿಸಬೇಕು.

ಖಾಸಗಿ ಆಸ್ಪತ್ರೆಗಳು ಕೊರೋನ ಸೇರಿದಂತೆ ಯಾವುದೇ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಕಡ್ಡಾಯಗೊಳಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಯಲ್ಲಿ ಸರಕಾರ ನಿಗದಿಪಡಿಸಿದ ದರ ಮಾತ್ರ ವಿಧಿಸುವಂತೆ ನೋಡಿಕೊಳ್ಳಬೇಕು. ನಿಯಮ ಉಲ್ಲಂಘಿಸುವ ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಮೇಲೆ ಕಠಿಣ ದಂಡನೆ ವಿಧಿಸಬೇಕು. ಕೊರೋನ ಪರೀಕ್ಷೆ, ಚಿಕಿತ್ಸೆ ಎಲ್ಲಾ ವಿಭಾಗದ ಜನರಿಗೆ ಉಚಿತವಾಗಿ ದೊರಕಬೇಕು.

ಖಾಸಗಿ ಆಸ್ಪತ್ರೆಗಳು ಕೋವಿಡ್ ಲಕ್ಷಣಗಳಿಲ್ಲದ ಇತರೆ ರೋಗಿಗಳಿಗೆ, ಗರ್ಭಿಣಿಯರಿಗೆ ಕೋವಿಡ್ ಪರೀಕ್ಷೆಗೆ ಬಲವಂತಪಡಿಸುವುದನ್ನು, ವರದಿ ಬರುವುದಕ್ಕೆ ಮಂಚಿತವಾಗಿ ಕೋವಿಡ್ ವಾರ್ಡ್‍ಗೆ ದಾಖಲಿಸುವುದನ್ನು ನಿರ್ಬಂಧಿಸಬೇಕು. ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ತಕ್ಷಣ ಬಿಡುಗಡೆಗೊಳಿಸಿ ಹೋಂ ಕ್ವಾರಂಟೈನ್ ಅಥವಾ ಸರಕಾರಿ ಆರೈಕೆ ಕೇಂದ್ರ ಸೇರಿಸುವಂತೆ ಆದೇಶಿಸಬೇಕು. ರೋಗಿಗಳ ದೂರುಗಳನ್ನು ಆಲಿಸಲು ಆರೋಗ್ಯ ಇಲಾಖೆಯ ಪ್ರತಿನಿಧಿಗಳನ್ನು ನೇಮಿಸಬೇಕು.

ತಕ್ಷಣದಲ್ಲಿ ಜಾರಿಗೆ ಬರುವಂತೆ ಖಾಸಗಿ ಕಾಲೇಜುಗಳ ಹಾಸ್ಟೆಲ್, ಸಭಾಂಗಣಗಳನ್ನು ಬಳಸಿ ಸರಕಾರಿ ಆರೈಕೆ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಬೇಕು. ಅವುಗಳಿಗೆ ಸರಿಯಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ರೋಗ ಲಕ್ಷಣಗಳಿಲ್ಲದ/ ಸೌಮ್ಯ ರೋಗ ಲಕ್ಷಣಗಳಿರುವವರನ್ನು ಅಲ್ಲಿಗೆ ದಾಖಲಿಸಬೇಕು. ಆಸ್ಪತ್ರೆಗಳ ಹಾಸಿಗೆಗಳನ್ನು ಗಂಭೀರ ರೋಗ ಲಕ್ಷಣಗಳುಳ್ಳ ರೋಗಿಗಳಿಗೆ ಮೀಸಲಿರಿಸಬೇಕು.

ವೆನ್‍ಲಾಕ್ ಆಸ್ಪತ್ರೆಯಲ್ಲಿ ದಾಖಲಾಗುವ ಕೋವಿಡ್ ರೋಗಿಗಳಿಗೆ ಇತರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಸರಿಯಾದ ಚಿಕಿತ್ಸೆಗಳು ದೊರಕುತ್ತಿಲ್ಲ, ಅದರಿಂದಾಗಿ ಸಾವುಗಳು ಸಂಭವಿಸುತ್ತಿವೆ ಎಂಬ ದೂರುಗಳು ಬರುತ್ತಿದ್ದು, ಜನರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ವೆನ್‍ಲಾಕ್ ಆಸ್ಪತ್ರೆಗೆ ತಜ್ಞ ವೈದ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಬೇಕು.

ಮಳೆಗಾಲದ ಕಾರಣ ಶೀತ, ಕೆಮ್ಮು ಜ್ವರದಂತಹ ಸಾಮಾನ್ಯ ಲಕ್ಷಣಗಳು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಇಂತಹ ಲಕ್ಷಣಗಳು ಉಳ್ಳವರಿಗೆ ಕೋವಿಡ್ ಕಾರಣ ಮುಂದಿಟ್ಟು ಖಾಸಗಿ ಕ್ಲಿನಿಕ್‍ಗಳಲ್ಲಿ ಔಷಧಿ ನೀಡುತ್ತಿಲ್ಲ. ಇದು ತಪ್ಪಾದ ವಿಧಾನವಾಗಿದ್ದು, ಸಾಮಾನ್ಯ ಜ್ವರಗಳಿಗೆ ಖಾಸಗಿ ಕ್ಲಿನಿಕ್‍ಗಳು ಔಷಧಿ ನೀಡಬೇಕು, ಜೊತೆಗೆ ಸರಕಾರಿ ಫೀವರ್ ಕ್ಲಿನಿಕ್‍ಗಳನ್ನು ಜನವಸತಿ ಬಡಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೆರೆದು ಚಿಕಿತ್ಸೆ ಒದಗಿಸಬೇಕು.

ಸೀಲ್‍ಡೌನ್ ಆದ ಮನೆಗಳ ಸದಸ್ಯರು ಮನೆಗಳಲ್ಲಿ 28 ದಿನಗಳ ದಿಗ್ಬಂಧನಕ್ಕೆ ಒಳಗಾಗಗಬೇಕಾಗುತ್ತದೆ. ಇಂತಹ ಕುಟುಂಬಗಳಿಗೆ ಜಿಲ್ಲಾಡಳಿತದ ವತಿಯಿಂದ ಅಗತ್ಯ ವಸ್ತುಗಳನ್ನು ಪೂರೈಸಬೇಕು ಎಂದವರು ಸರಕಾರಕ್ಕೆ ಆಗ್ರಹಿಸಿದ್ದಾರೆ.








  • Blogger Comments
  • Facebook Comments

1 comments:

  1. Yenilla diddru at least sala manna nadali elladiddare .elladiddare current bill madabahudalla.

    ReplyDelete

Item Reviewed: ಲಾಕ್ ಡೌನ್ ಮಾಡಿದರೆ ಸಾಲದು, ಜನಸಾಮಾನ್ಯರ ಕಷ್ಟಗಳಿಗೆ ಪರಿಹಾರ ಒದಗಿಸಬೇಕು. : ಸಾಮಾಜಿಕ ಹೋರಾಟಗಾರರ ಆಗ್ರಹ Rating: 5 Reviewed By: karavali Times
Scroll to Top