ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪನಡು ಗ್ರಾಮದ ಕೋಣಿಮಾರು ಪ್ರದೇಶದಲ್ಲಿ ಮಣ್ಣು ಕುಸಿತ ಆರಂಭಗೊಂಡಿದ್ದು, ಇನ್ನೊಂದು ಬಂಗ್ಲಗುಡ್ಡೆಯಾಗುವ ಭೀತಿಯನ್ನು ಇಲ್ಲಿನ ಜನ ವ್ಯಕ್ತಪಡಿಸಿದ್ದಾರೆ.
ಸಜಿಪನಡು ಗ್ರಾಮದ ಕೋಣಿಮಾರು ಎಂಬ ಈ ಪ್ರದೇಶದಲ್ಲಿ ಸುಮಾರು 35 ಅಡಿ ಎತ್ತರದಲ್ಲಿ ಕೆಂಪುಗುಡ್ಡೆ ಎಂಬ ಪುಟ್ಟ ಪ್ರದೇಶವಿದ್ದು, ಸದ್ರಿ ಕೆಂಪುಗುಡ್ಡೆಯಲ್ಲಿ ಸುಮಾರು 15 ವಾಸದ ಮನೆಗಳಿವೆ. ಇದೀಗ ಕೆಂಪುಗುಡ್ಡೆಯು ಕುಸಿಯುತ್ತಿದ್ದು, 35 ಅಡಿ ಎತ್ತರದಲ್ಲಿರುವ ಮನೆಗಳ ಬದಿಯಲ್ಲೇ ಕುಸಿತ ಕಂಡು ಬರುತ್ತಿದೆ. ಈ ಗುಡ್ಡದ ಕೆಳಭಾಗದಲ್ಲಿಯೂ ವಾಸ್ತವ್ಯದ ಮನೆಗಳಿದ್ದು, ಗುಡ್ಡದ ಮೇಲಿರುವ ಮನೆಗಳು ಕೆಳ ಭಾಗದಲ್ಲಿರುವ ಮನೆಗಳ ಮೇಲೆ ಕುಸಿದು ಬೀಳುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗಿದೆ. ಯಾವುದೇ ಕ್ಷಣದಲ್ಲೂ ಈ ಪ್ರದೇಶದಲ್ಲಿ ಅವಘಡ ಸಂಭವಿಸುವ ಆತಂಕ ಇಲ್ಲಿನ ನಿವಾಸಿಗಳಿಗೆ ಉಂಟಾಗಿದೆ. ಇದರಿಂದಾಗಿ ಇಲ್ಲಿನ ಜನ ನಿತ್ಯವೂ ಭೀತಿ ಹಾಗೂ ಆತಂಕದಿಂದಲೇ ದಿನದೂಡುವಂತಾಗಿದೆ.
ಇಲ್ಲಿನ ಗಂಭೀರ ಸಮಸ್ಯೆ ಬಗ್ಗೆ ಈಗಾಗಲೇ ಹಲವು ಬಾರಿ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿದ್ದರೂ ಇದುವರೆಗೂ ಯಾವುದೇ ಸ್ಪಂದನೆ ದೊರೆತಿರುವುದಿಲ್ಲ ಎನ್ನುವ ಸ್ಥಳೀಯ ನಿವಾಸಿಗಳು ಈ ಪ್ರದೇಶದ ಬಗ್ಗೆ ನಿರ್ಲಕ್ಷ್ಯ ತೋರಿದರೆ, ಇತ್ತೀಚೆಗೆ ಗುರುಪುರ-ಕೈಕಂಬದ ಬಂಗ್ಲಗುಡ್ಡೆಯಲ್ಲಿ ಆದಂತಹ ಗಂಭೀರ ಅನಾಹುತ ಸಂಭವಿಸುವ ಎಲ್ಲ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ತಕ್ಷಣ ಸಕಾಲದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೆಂಪುಗುಡ್ಡೆ ಪ್ರದೇಶಕ್ಕೆ ಸೂಕ್ತ ಕಾಯಕಲ್ಪ ಒದಗಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
0 comments:
Post a Comment