ರಸ್ತೆ ಮಾರ್ಜಿನ್-ಗುಡ್ಡದ ಮಧ್ಯೆ ಸೌಲಭ್ಯಗಳಿಲ್ಲದ ಇಕ್ಕಟ್ಟಾದ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧ
ಬಂಗ್ಲೆಗುಡ್ಡೆ ಪ್ರಕರಣ ಹಸಿಯಾಗಿದ್ದರೂ ಕಣ್ಣು ತೆರೆಯದ ಅಧಿಕಾರಿಗಳು-ಜನಪ್ರತಿನಿಧಿಗಳು
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು ಎಂಬಲ್ಲಿ ರಾಜ್ಯ ಅಲ್ಪಸಂಖ್ಯಾತ ಇಲಾಖೆಯಿಂದ ಹಾಸ್ಟೆಲ್ ಕಾಮಗಾರಿ ನಡೆಯುತ್ತಿದ್ದು, ಇದು ಸಂಪೂರ್ಣ ಅಪಾಯಕಾರಿ ಸ್ಥಳದಲ್ಲಿ ನಿರ್ಮಾಣವಾಗುತ್ತಿದೆ. ಇದು ಹಾಸ್ಟೆಲ್ ನಿರ್ಮಾಣಕ್ಕೆ ಸೂಕ್ತ ಜಾಗವಲ್ಲ ಮಾತ್ರವಲ್ಲ ರಸ್ತೆ ಮಾರ್ಜಿನ್ ಹಾಗೂ ಖಾಸಗಿ ಜಮೀನಿನನ್ನು ಅಗೆದು ಹಾಕಿ ನಿರ್ಮಾಣ ಮಾಡಲಾಗುತ್ತಿದೆ. ಈ ಬಗ್ಗೆ ಸ್ವತಃ ಲೋಕೋಪಯೋಗಿ ಇಲಾಖಾಧಿಕಾರಿಗಳೇ ಅಪಾಯಕಾರಿ ಹಂತದಲ್ಲಿ ನಡೆಯುತ್ತಿರುವ ಕಾಮಗಾರಿ ನಿಲ್ಲಿಸುವಂತೆ ವರದಿ ಮಾಡಿದ್ದರೂ ಕಾಮಗಾರಿ ಮುಂದುವರಿದಿರುವ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಇಲ್ಲಿನ ಖಾಸಗಿ ವರ್ಗ ಜಮೀನಿನ ಮಾಲಕ ಜಿ ಶಂಕರ ಶೆಟ್ಟಿ ಅವರು ಬಂಟ್ವಾಳ ಶಾಸಕ, ಅಲ್ಪಸಂಖ್ಯಾತ ಇಲಾಖೆ, ಲೋಕೋಪಯೋಗಿ ಇಲಾಖೆ, ಬಂಟ್ವಾಳ ಪೊಲೀಸರಿಗೆ ದೂರು ನೀಡಿ ತಕ್ಷಣ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಅಮ್ಮುಂಜೆ ಗ್ರಾಮದ ಸರ್ವೆ ನಂಬ್ರ 94/2ಪಿ2 ರಲ್ಲಿನ 1.04 ಎಕ್ರೆ ಜಮೀನು ಜಿ ಶಂಕರ ಶೆಟ್ಟಿ ಎಂಬವರಿಗೆ ಸೇರಿದ ಖಾಸಗಿ ವರ್ಗ ಜಮೀನಾಗಿದ್ದು, ಪಕ್ಕದಲ್ಲಿ ಮಂಗಳೂರು(ಬೈತುರ್ಲಿ)-ನೀರುಮಾರ್ಗ-ಕಲ್ಪನೆ ಜಿಲ್ಲಾ ಮುಖ್ಯ ರಸ್ತೆ ಇದೆ. ಇವರ ಖಾಸಗಿ ಜಮೀನು ಹಾಗೂ ರಸ್ತೆ ಮಾರ್ಜಿನ್ ಹೊರತುಪಡಿಸಿ ಇಲ್ಲಿನ ಬೇರೆ ಜಾಗ ಇರುವುದಿಲ್ಲ. ಆದರೂ ಶಂಕರ ಶೆಟ್ಟಿ ಅವರ ಗುಡ್ಡ ಜಮೀನನ್ನು ಅಗೆದು ಹಾಸ್ಟೆಲ್ ನಿರ್ಮಾಣಕ್ಕೆ ಕಾಮಗಾರಿ ನಡೆಸಲಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಶಂಕರ ಶೆಟ್ಟಿ ಅವರು ಕಳೆದ ಡಿಸೆಂಬರ್ ತಿಂಗಳಲ್ಲೇ ಲೋಕೋಪಯೋಗಿ ಇಲಾಖೆಗೆ ದೂರಿಕೊಂಡಿದ್ದು, ಇವರ ದೂರಿನ ಆಧಾರದಲ್ಲಿ ಸ್ಥಳ ತನಿಖೆ ನಡೆಸಿದ ಇಲಾಖಾ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಕಟ್ಟಡ ನಿರ್ಮಾಣದ ಹಿಂದಿನ ಜಾಗ ಗುಡ್ಡವಾಗಿದ್ದು, ಸುಮಾರು 10 ಮೀಟರಿಗಿಂತ ಎತ್ತರದಲ್ಲಿರುವುದರಿಂದ ಕುಸಿತ ಸಾಧ್ಯತೆ ಇದೆ. ತಕ್ಷಣ ಕಾಮಗಾರಿ ನಿಲ್ಲಿಸುವಂತೆ ಮಾರ್ಚ್ 24 ರಂದು ಅಲ್ಪಸಂಖ್ಯಾತ ಇಲಾಖೆಗೆ ವರದಿ ಮಾಡಿ ಸೂಚಿಸಿದೆ.
ಆದರೂ ಇಲಾಖೆ ಕಾಮಗಾರಿ ಮುಂದುವರಿಸಿದ್ದು, ಇಲ್ಲಿ ಒಂದು ಹಾಸ್ಟೆಲ್ ಕಟ್ಟಡ ನಿರ್ಮಾಣವಾದರೆ ಈಗಾಗಲೇ ಸುಮಾರು 30-40 ಅಡಿ ಎತ್ತರದ ಧರೆ ನಿರ್ಮಾಣವಾಗಿದ್ದು, ಗುಡ್ಡ ಕುಸಿತದಂತಹ ಅಪಾಯ ಸಂಭವಿಸುವ ಸಾಧ್ಯತೆ ಇದ್ದು, ಪ್ರಾಣಾಪಾಯವೂ ಉಂಟಾಗಲಿದೆ ಎಂದು ಅಭಿಪ್ರಾಯಪಡಲಾಗುತ್ತಿದೆ. ಅಲ್ಲದೆ ಹಾಸ್ಟೆಲ್ ಸೌಲಭ್ಯಕ್ಕೆ ಬೇಕಾದ ಯಾವುದೇ ಸೌಲಭ್ಯಗಳು, ಸ್ಥಳಾವಕಾಶ, ಜಮೀನಿ ಇದ್ಯಾವುದೂ ಇಲ್ಲಿ ಇಲ್ಲದೆ ಇರುವುದರಿಂದ ಇಲ್ಲಿ ಹಾಸ್ಟೆಲ್ ಒಟ್ಟು ನಷ್ಟಕ್ಕೆ ಕಾರಣವಾಗುತ್ತಿದೆ. ಕೇವಲ ಖಾಸಗಿ ಗುಡ್ಡ ಜಮೀನು ಹಾಗೂ ರಸ್ತೆ ಮಾರ್ಜಿನ್ ಮಧ್ಯೆ ಇರುವ ಇಕ್ಕಟ್ಟಾದ ಜಾಗದಲ್ಲಿ ಈ ಕಟ್ಟಡ ನಿರ್ಮಿಸಲು ಹೊರಟಿರುವ ಇಲಾಖೆಯ ಕಾರ್ಯವೈಖರಿಯನ್ನೇ ಪ್ರಶ್ನಿಸಬೇಕಾಗಿದೆ. ಈಗಾಗಲೇ ಜಿಲ್ಲೆಯ ಕೈಕಂಬದಲ್ಲಿ ಇತ್ತೀಚೆಗೆ ನಡೆದ ಗುಡ್ಡಕುಸಿತ ಪ್ರಕರಣ ಜೀವಂತವಾಗಿರುತ್ತಲೇ ಅಲ್ಪಸಂಖ್ಯಾತ ಇಲಾಖೆ ಇಂತಹದೇ ಸಾಹಸಕ್ಕೆ ಕೈ ಹಾಕಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟವರು ಈ ಬಗ್ಗೆ ಕೂಲಂಕುಷ ಪರಿಶೀಲನೆ ನಡೆಸಿ ಸಂಭಾವ್ಯ ಅಪಾಯಕ್ಕೆ ಮುಂಚಿತವಾಗಿ ಎಚ್ಚೆತ್ತುಕೊಂಡು ಕಾಮಗಾರಿ ಸ್ಥಗಿತಕ್ಕೆ ಸೂಚನೆ ನೀಡಬೇಕು ಎಂದು ಸ್ಥಳೀಯ ಜಮೀನು ಮಾಲಕ ಶಂಕರ ಶೆಟ್ಟಿ ಆಗ್ರಹಿಸಿದ್ದಾರೆ.
0 comments:
Post a Comment