ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಮಾಜಿ ಅಧ್ಯಕ್ಷ, ಜಿ ಪಂ ಮಾಜಿ ಸದಸ್ಯ, ಹಿರಿಯ ಕಾಂಗ್ರೆಸ್ ಮುಖಂಡ ಹಾಜಿ ಎಸ್ ಅಬ್ಬಾಸ್ ಸಜಿಪ (72) ಅನಾರೋಗ್ಯದಿಂದ ಸೋಮವಾರ ಸಂಜೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಂದಾಳುವಾಗಿದ್ದ ಅಬ್ಬಾಸ್ ಅವರು ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಇವರು ಎಲ್ಲ ಚಟುವಟಿಕೆಗಳಿಂದ ದೂರವಾಗಿದ್ದರು. ಸೋಮವಾರ ಇವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಜಿಪನಡು ಜುಮಾ ಮಸೀದಿ ಆಡಳಿತ ಸಮಿತಿಯಲ್ಲಿ ಹಲವಾರು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆಸಲ್ಲಿಸಿರುವ ಹಾಜಿ ಎಸ್ ಅಬ್ಬಾಸ್ ಅವರು ಸಜಿಪ ರೇಂಜ್ ಮದ್ರಸ ಮೆನೇಜ್ಮೆಂಟ್ ಎಸೋಸಿಯೇಷನ್ ಅಧ್ಯಕ್ಷರಾಗಿ, ದ.ಕ. ಜಿಲ್ಲಾ ಮದ್ರಸ ಮೆನೇಜ್ಮೆಂಟ್ ಎಸೋಸಿಯೇಷನ್ ಪದಾಧಿಕಾರಿಯಾಗಿ ಹಾಗೂ ಇನ್ನೂ ಹಲವು ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಸಂತಾಪ
ಹಾಜಿ ಎಸ್ ಅಬ್ಬಾಸ್ ಅವರ ನಿಧನಕ್ಕೆ ಮಾಜಿ ಸಚಿವ ಬಿ ರಮಾನಾಥ ರೈ, ಮಂಗಳೂರು ಶಾಸಕ ಯು ಟಿ ಖಾದರ್, ಬಂಟ್ವಾಳ ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಕಾಂಗ್ರೆಸ್ ಸೇವಾದಳ ಘಟಕದ ಮುಖಂಡರ ಸಹಿತ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
0 comments:
Post a Comment