ಬೆಂಗಳೂರು (ಕರಾವಳಿ ಟೈಮ್ಸ್) : ಪ್ರಥಮ ಪಿಯುಸಿ ಪೂರಕ ಪರೀಕ್ಷಾ ದಿನಾಂಕವನ್ನು ಪ್ರಕಟ ಮಾಡಿ ಪಿಯುಸಿ ಬೋರ್ಡ್ ಆದೇಶ ಹೊರಡಿಸಿದೆ. ಜುಲೈ 16 ರಿಂದ 27ರ ಒಳಗೆ ಪರೀಕ್ಷೆ ಮುಗಿಸಲು ಪಿಯು ಬೋರ್ಡ್ ಸೂಚಿಸಿದೆ.
ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ಆಯಾ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ. ಜೊತೆಗೆ ಕಾಲೇಜುಗಳು ಅಗತ್ಯ ವೇಳಾಪಟ್ಟಿ ರಚನೆ ಮಾಡಿಕೊಂಡು ಪೂರಕ ಪರೀಕ್ಷೆ ನಡೆಸಬೇಕಾಗಿದೆ. ಹೀಗಾಗಿ ಪಿಯುಸಿ ಬೋರ್ಡ್ ಘೋಷಣೆ ಮಾಡಿದ ದಿನಾಂಕದ ಒಳಗೆ ಪರೀಕ್ಷೆ ಮುಗಿಸಬೇಕು.
ಕೊರೊನಾ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮವಹಿಸಿ ಪರೀಕ್ಷೆ ನಡೆಸಲು ಬೋರ್ಡ್ ಸೂಚಿಸಿದೆ.
ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪರೀಕ್ಷೆ ಮುಗಿದ ನಂತರ ಕೇಂದ್ರದ ಕೊಠಡಿಗೆ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಿಸಬೇಕು. ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿ ಮಾಡಬೇಕು. ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆಗೆ ಹಾಜರಾಗಬೇಕು. ವಿದ್ಯಾರ್ಥಿಗಳು ಕಡ್ಡಾಯವಾಗಿ ಸ್ಯಾನಿಟೈಸ್ ಬಳಸಬೇಕು. ಪರೀಕ್ಷಾ ಕೇಂದ್ರದಲ್ಲಿ ಗುಂಪು ಸೇರದಂತೆ ಅಗತ್ಯ ಕ್ರಮವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ವ್ಯವಸ್ಥೆ ಮಾಡಬೇಕು. ಪೋಷಕರು ಪರೀಕ್ಷಾ ಕೇಂದ್ರದ ಬಳಿ ಸೇರದಂತೆ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಬೋರ್ಡ್ ಆದೇಶದಲ್ಲಿ ತಿಳಿಸಿದೆ.
ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಜುಲೈ 27ರ ಒಳಗೆ ಪ್ರಥಮ ಪಿಯುಸಿ ಪೂರಕ ಪರೀಕ್ಷೆ ಮುಗಿಸಬೇಕು ಎಂದು ಪಿಯುಸಿ ಬೋರ್ಡ್ ತಿಳಿಸಿದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಪರೀಕ್ಷಾ ಸಿಬ್ಬಂದಿ ಕೂಡ ಅಗತ್ಯ ಮುಂಜಾಗ್ರತಾ ಕ್ರಮವಹಿಸಬೇಕಾಗಿದೆ. ಕಂಟೈನ್ಮೆಂಟ್ ಝೋನ್‍ನಿಂದ ಬರುವವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಕೊಡಬೇಕು. ಬೇರೆ ಕಾಯಿಲೆ ಇರುವವರಿಗೂ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಬೇಕು. ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಬೇಕು ಎಂದು ಪಿಯುಸಿ ಬೋರ್ಡ್ ಆದೇಶ ಹೊರಡಿಸಿದೆ.
0 comments:
Post a Comment